ದಿನೇದಿನೇ ಹಂದಿಜ್ವರ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿದೇಶ ಪ್ರಯಾಣವನ್ನು ಸ್ಥಗಿತಗೊಳಿಸಬೇಕು ಎಂದು ಆರೋಗ್ಯ ಸಚಿವಾಲಯವು ಜನತೆಗೆ ಮನವಿ ಮಾಡಿದೆ.
ಸ್ವೈನ್ ಫ್ಲೂ ಭೀತಿ ಕಡಿಮೆಯಾಗುವ ತನಕ ವಿದೇಶಿ ಪ್ರಯಾಣಗಳನ್ನು ಸ್ಥಗಿತಗೊಳಿಸಬೇಕು ಎಂಬುದಾಗಿ ಆರೋಗ್ಯ ಸಚಿವ ಗುಲಾಂ ನಬಿ ಅಜಾದ್ ಅವರು ಶಿಕ್ಷಣ ಸಂಸ್ಥೆಗಳಿಗೆ ಮನವಿ ಮಾಡಿದ್ದಾರೆ.
ಜಾಗತಿಕವಾಗಿ ಹಂದಿಜ್ವರ ವೈರಸ್ ನಿಯಂತ್ರಣಕ್ಕೆ ಬರುವ ತನಕ ವಿದೇಶಿ ಪ್ರಯಾಣಗಳನ್ನು ಮುಂದೂಡುವಂತೆ ನಾವು ಜನತೆಯನ್ನು ಮನವಿ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.
ಅದಾಗ್ಯೂ, ಜನತೆ ಭಯಭೀತರಾಗಬೇಕಿರುವ ಅವಶ್ಯಕತೆ ಇಲ್ಲ ಎಂದು ಮನವಿ ಮಾಡಿದ್ದಾರೆ. ಇದು ಗುಣಪಡಿಸಬಲ್ಲ ಖಾಯಿಲೆಯಾಗಿದ್ದು, ಔಷಧಿಗಳು ಉಚಿತವಾಗಿ ಲಭ್ಯವಿದೆ ಎಂದು ಅವರು ಹೇಳಿದ್ದಾರೆ. ಇದುವರೆಗೆ ಪತ್ತೆಯಾಗಿರುವ 23 ಪ್ರಕರಣಗಳಲ್ಲಿ ಇದೀಗಾಗಲೇ 11 ಮಂದಿ ಸೂಕ್ತ ಚಿಕಿತ್ಸೆ ಪಡೆದು ಆಸ್ಪತ್ರೆಗಳಿಂದ ತೆರಳಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
29ರ ಹರೆಯದ ಓರ್ವ ಮಹಿಳೆ ಹಾಗೂ ಆಕೆಯ 3ರ ಹರೆಯ ಪುತ್ರ ಹಾಗೂ ಜಲಂಧರ್‌ನ ವ್ಯಕ್ತಿಯೊಬ್ಬಾತನಿಗೆ ಸೋಂಕು ತಗಲಿರುವುದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಭಾನುವಾರ ಪತ್ತೆಯಾಗಿತ್ತು.
ಇದುವರೆಗೆ ಪತ್ತೆಯಾಗಿರುವ ಪ್ರಕರಣಗಳು ದೆಹಲಿ 6 ಹೈದರಾಬಾದ್ 12 ಬೆಂಗಳೂರು 2 ಗೋವಾ 1 ತಮಿಳ್ನಾಡು 2 |