ಸೂರತ್‌ನಲ್ಲಿ ವಿಶ್ವಹಿಂದೂ ಪರಿಷತ್ ಕಾರ್ಯಕರ್ತರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಗುಜರಾತ್‌ನ ನರೇಂದ್ರ ಮೋದಿ ಸರಕಾರವು ಬಂಧಿಸಿರುವ ಕ್ರಮವನ್ನು ವಿಹಿಂಪ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ರಾಜ್ಯ ಸರಕಾರದ 'ಮುಸ್ಲಿಂ ಪರ, ಹಿಂದೂ ವಿರೋಧಿ' ಮನೋಭಾವವನ್ನು ಖಂಡಿಸುವುದಾಗಿ ಹೇಳಿದೆ.
ವಿಶ್ವಹಿಂದೂ ಪರಿಷತ್ತು ಸೋಮವಾರ ಸೂರತ್ ಪಟ್ಟಣದಲ್ಲಿ ಸ್ವಯಂ ಪ್ರೇರಿತ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಸೂರತ್ ಪೊಲೀಸರು ವಿಹಿಂಪ ಮತ್ತು ಬಜರಂಗ ದಳ ಕಾರ್ಯಕರ್ತರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಭಾನುವಾರ ರಾತ್ರಿ ಕಸ್ಟಡಿಗೆ ತೆಗೆದುಕೊಂಡಿದ್ದರು. ಈ ಕಾರಣಕ್ಕೆ ಸೋಮವಾರದ ಬಂದ್ ವಿಫಲವೂ ಆಗಿತ್ತು.
ಶಾಲಾ ಬಾಲಕಿ ಮೇಲೆ ಮೂವರು ಮುಸ್ಲಿಂ ಯುವಕರು ಅತ್ಯಾಚಾರ ಮಾಡಿದ್ದನ್ನು ಪ್ರತಿಭಟಿಸಿ ವಿಶ್ವ ಹಿಂದೂ ಪರಿಷತ್ತು ಸೋಮವಾರ ಸೂರತ್ ಬಂದ್‌ಗೆ ಕರೆ ನೀಡಿತ್ತು. ಆರೋಪಿಗಳಲ್ಲಿ ಇಬ್ಬರು ಪೊಲೀಸನೊಬ್ಬನ ಮಕ್ಕಳು.
ವಿಶ್ವಹಿಂದೂ ಪರಿಷತ್ತಿನ ಸುಮಾರು 60 ಕಾರ್ಯಕರ್ತರನ್ನು ಬಂಧಿಸುವ ಮೂಲಕ ರಾಜ್ಯ ಸರಕಾರವು ತನ್ನ ಹಿಂದೂ ವಿರೋಧಿ ಮನೋಭಾವವನ್ನು ಬಯಲಾಗಿಸಿದೆ ಎಂದು ವಿಹಿಂಪ ದಕ್ಷಿಣ ಗುಜರಾತ್ ಕಾರ್ಯದರ್ಶಿ ನಿರಾಲ್ ಶಾ ಪ್ರತಿಕ್ರಿಯಿಸಿದ್ದಾರೆ.
ಆದರೆ ರಾಜ್ಯ ಸರಕಾರ ಮತ್ತು ವಿಶ್ವ ಹಿಂದೂ ಪರಿಷತ್ ನಡುವಣ ಸಂಬಂಧವು ಹಳಸಿದೆಯೇ ಎಂಬ ಕುರಿತಾದ ಪ್ರಶ್ನೆಗೆ, ರಾಜ್ಯ ಸರಕಾರದ ಕ್ರಮವನ್ನು ಖಂಡಿಸುವ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ವಿಹಿಂಪ ರಾಜ್ಯ ಜಂಟಿ ಪ್ರಧಾನ ಕಾರ್ಯದರ್ಶಿ ರಣಛೋಡ್ ಭಾರ್ವಾದ್ ಅವರು ನೇರ ಉತ್ತರ ನೀಡಲಿಲ್ಲ. |