" ನಾನೀಗ ಸೈಲಂಟ್ ಮೋಡಲ್ಲಿದ್ದೇನೆ". ಇದು ಹಿರಿಯ ಕಾಂಗ್ರೆಸ್ ನಾಯಕ ಅರ್ಜುನ್ ಸಿಂಗ್ ಅವರು ನೀಡಿದ ನಿಗೂಢ ಉತ್ತರ. ಕೇಂದ್ರ ಬಜೆಟ್ಗೆ ಸಲಹೆಗಳನ್ನು ನೀಡಲು ಕರೆಯಲಾಗಿರುವ ಸಭೆಯಲ್ಲ ಪ್ರಣಬ್ ಮುಖರ್ಜಿ ಹಾಗೂ ಪಕ್ಷದ ಇತರ ಮುಖಂಡರೊಂದಿಗಿನ ಸಭೆಯ ಬಳಿಕ ಗಾಲಿಕುರ್ಚಿಯಲ್ಲಿ ಹೊರಬಂದ ಅವರು ಹೀಗೆಂದು ಪ್ರತಿಕ್ರಿಯಿಸಿದ್ದಾರೆ.ಕೇಂದ್ರ ಸಂಪುಟಕ್ಕೆ ಅರ್ಜುನ್ ಸಿಂಗ್ ಅವರನ್ನು ಸೇರಿಸದೇ ಇರುವ ಹಿನ್ನೆಲೆಯಲ್ಲಿ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಹಿಂದಿನ ಸರ್ಕಾರದಲ್ಲಿ ಮಾನವ ಸಂಪನ್ಮೂಲ ಸಚಿವರಾಗಿರದ್ದ ಸಿಂಗ್ ಈ ಬಾರಿಯೂ ಸ್ಥಾನ ಪಡೆಯುವ ಸಂಭವನೀಯರ ಪಟ್ಟಿಯಲ್ಲಿದ್ದರು. ಅರ್ಜುನ್ ಸಿಂಗ್ ಅವರು ಮಧ್ಯಪ್ರದೇಶದ ಮುಖ್ಯಮಂತ್ರಿ, ಪಂಜಾಬ್ ಗವರ್ನರ್, ಪಕ್ಷದ ಉಪಾಧ್ಯಕ್ಷ ಹಾಗೂ ಕೇಂದ್ರ ಸಚಿವ ಸ್ಥಾನ ಸೇರಿದಂತೆ ಪಕ್ಷದ ಅನೇಕ ಹುದ್ದೆಗಳನ್ನು ಅನುಭವಿಸಿರುವವರು.ನೂತನ ಸಂಪುಟದಲ್ಲಿ ಸ್ಥಾನ ಸಿಗದಿರುವುದಕ್ಕೆ ಅಸಂತುಷ್ಟರಾಗಿದ್ದಿರಾ ಎಂಬ ಪ್ರಶ್ನೆಗೆ ಉತ್ತರಿಸಿಲು ನಿರಾಕರಿಸಿದ ಅವರು ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ. ಇದೇವೇಳೆ ಸಾಂಸ್ಥಿಕ ಹುದ್ದೆಯನ್ನು ಅಲಂಕರಿಸಲು ಆಸಕ್ತರಾಗಿದ್ದೀರಾ ಎಂಬ ಪ್ರಶ್ನೆಗೂ ಉತ್ತರಿಸಲು ಅವರು ನಿರಾಕರಿಸಿದರು. |