ಬಿಜೆಪಿಯು ಹಿಂದುತ್ವ ಹಾಗೂ ಆರೆಸ್ಸೆಸ್ ಎರಡನ್ನೂ ಬಿಡುವಂತಿಲ್ಲ ಎಂಬುದಾಗಿ ಬಿಜೆಪಿಯ ಹಿರಿಯ ನಾಯಕ ಮುರಳಿ ಮನೋಹರ್ ಜೋಷಿ ಹೇಳಿದ್ದಾರೆ.
ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಬಿಜೆಪಿಯ ಪರಿಸ್ಥಿತಿಯು ಜ್ವಾಲಾಮುಖಿಯಂತಾಗಿದೆ ಎಂಬ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.
"ಪಕ್ಷದ ಆಂತರಿಕ ಪರಿಸ್ಥಿತಿಯ ಕುರಿತು ಮಾಧ್ಯಮಗಳ ಎದುರು ಮಾತನಾಡಬಾರದು ಎಂಬುದಾಗಿ ನಮ್ಮ ಪಕ್ಷದ ಅಧ್ಯಕ್ಷರು ತಾಕೀತು ಮಾಡಿದ್ದಾರೆ" ಎಂಬುದಾಗಿ ಪಕ್ಷಾಧ್ಯಕ್ಷ ರಾಜನಾಥ್ ಸಿಂಗ್ ಮತ್ತು ಪಕ್ಷದ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಅವರೊಂದಿಗೆ 'ಅಷ್ಟಕಷ್ಟೆ' ಸಂಬಂಧ ಹೊಂದಿರುವ ಜೋಷಿ ನುಡಿದರು.
"ನಾನು ಬಿಜೆಪಿ ಅಧ್ಯಕ್ಷನಾಗಿದ್ದ ವೇಳೆಯೂ ಇಂತಹ ಪರಿಸ್ಥಿತಿಗಳು ಎದುರಾಗಿದ್ದು ತಾನೂ ಆ ಸಂದರ್ಭದಲ್ಲಿ ಪಕ್ಷದ ಕುರಿತು ಬಹಿರಂಗ ಹೇಳಿಕೆ ನೀಡದಂತೆ ತಿಳಿಸಿದ್ದೆ, ನನ್ನ ಸಹೋದ್ಯೋಗಿಗಳು ಯಾವಾಗಲು ಒಂದಾಗಿದ್ದರು ಮತ್ತು ಬಾಯ್ಮುಚ್ಚಿಸುವಂತಹ ಒತ್ತಡಕ್ಕೆ ನಾನ್ಯಾವತ್ತು ಬಿದ್ದಿರಲಿಲ್ಲ ಮತ್ತು ಆಗ ಯಾರೂ ಪಕ್ಷ ತೊರೆಯುತ್ತಿರಲಿಲ್ಲ" ಎಂದು ಮಾಜಿ ಅಧ್ಯಕ್ಷರು ಹಾಲಿ ನಾಯಕರನ್ನು ಕಟುಕಿದರು.
ಚುನಾವಣಾ ಸೋಲಿನ ಹಿನ್ನೆಲೆಯಲ್ಲಿ ಪಕ್ಷವು ಹಿಂದುತ್ವದ ತನ್ನ ಬದ್ಧತೆ ಹಾಗೂ ಆರೆಸ್ಸೆಸ್‌ನೊಂದಿಗಿನ ಸಂಬಂಧ ಕಡಿದುಕೊಳ್ಳಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನಾವು ನಮ್ಮ ಸಿದ್ಧಾಂತವನ್ನು ಬಿಡುವುದೂ ಇಲ್ಲ ಮತ್ತು ಸಂಘಪರಿವಾರದ ಸಂಬಂಧವನ್ನೂ ಕಡಿದುಕೊಳ್ಳುವುದಿಲ್ಲ ಎಂದು ಹೇಳಿದರು. |