ಪಾಕಿಸ್ತಾನದೊಂದಿಗೆ ಭಾರತವು ಮತ್ತೆ ಶಾಂತಿಯನ್ನು ಬಯಸುತ್ತದಾದರೂ, ಭಾರತದ ವಿರುದ್ಧ ನಡೆಯುತ್ತಿರುವ ಭಯೋತ್ಪಾದನಾ ಕೃತ್ಯವನ್ನು ತಡೆಯಲು ಇಸ್ಲಾಮಾಬಾದ್ ತಾಲಿಬಾನ್ ವಿರುದ್ಧ ಕೈಗೊಂಡಿರುವಂತಹ 'ಬಲವಾದ ಮತ್ತು ಪರಿಣಾಮಕಾರಿ' ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.
ಪಾಕಿಸ್ತಾನಕ್ಕೆ ಭಯೋತ್ಪಾದನೆಯನ್ನು ಹತ್ತಿಕ್ಕಲು ಮಂಗಳವಾರ ತಾಕೀತು ಮಾಡಿದ ಬಳಿಕ ಪ್ರಧಾನಿಯವರ ಈ ಅಭಿಪ್ರಾಯ ಹೊರಬಿದ್ದಿದೆ.
ಭಯೋತ್ಪಾದನೆಯ ವಿರುದ್ಧ ಹೋರಾಡುವಲ್ಲಿ ಪ್ರಾಮಾಣಿಕ ಪ್ರಯತ್ನವಿದ್ದರೂ, ಸರ್ಕಾರವು ಎದುರಿಸುತ್ತಿರುವ ಕಷ್ಟದ ಕುರಿತು ಮಾತನಾಡಿದ್ದು ಈ ಪಿಡುಗನ್ನು ತೊಡೆದು ಹಾಕಲು 'ಸ್ವಲ್ಪ ಕಾಲಾವಕಾಶ' ಕೋರಿದ್ದಾರೆ ಎಂದು ಸಿಂಗ್ ತಿಳಿಸಿದರು. ಅವರು ರಶ್ಯಾ ಪ್ರವಾಸ ಮುಗಿಸಿ ಭಾರತಕ್ಕೆ ಹಿಂತಿರುಗುತ್ತಿದ್ದ ವೇಳೆ ವಿಮಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ರಶ್ಯದಲ್ಲಿ ನಡೆದ ಶೃಂಗ ಸಭೆಯ ಪಾರ್ಶ್ವದಲ್ಲಿ ಸಿಂಗ್ ಹಾಗೂ ಜರ್ದಾರಿ ಅವರು ಮಾತುಕತೆ ನಡೆಸಿದ್ದರು. ಮಾತುಕತೆಯು ಪಾಕಿಸ್ತಾನದ ನೆಲದಿಂದ ಕಾರ್ಯಾಚರಿಸುತ್ತಿರುವ ಭಯೋತ್ಪಾದನೆಯ ಕುರಿತು ಮಾತುಕತೆಯು ಕೇಂದ್ರೀಕೃತವಾಗಿತ್ತು.
|