ಮುಂಬೈದಾಳಿಯ ಪಾತಕಿ ಅಜ್ಮಲ್ ಅಮೀರ್ ಕಸಬ್ ಗುರವಾರ ವಿಶೇಷ ನ್ಯಾಯಾಲಯದಲ್ಲಿ ತಾನು ನಡೆಸಿದ ಮಾರಣ ಹೋಮದ ದೃಶ್ಯಾವಳಿಗಳನ್ನು ಅತ್ಯಂತ ತಲ್ಲೀನತೆಯಿಂದ ವೀಕ್ಷಿಸಿದ. ಇವು ಮುಂಬೈ ಛತ್ರಪತಿ ಶಿವಾಜಿ ರೈಲ್ವೇ ನಿಲ್ದಾಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ದಾಖಲಾಗಿರುವ ದೃಶ್ಯಗಳು.
ಜೀವಭಯದಿಂದ ಜನತೆ ಭೀತರಾಗಿ ಓಡುತ್ತಿರುವ ಮತ್ತು ಪೊಲೀಸರು ಉಗ್ರರನ್ನು ಎದುರಿಸಲು ಪ್ರಯತ್ನಿಸು ಈ ದೃಶ್ಯಗಳನ್ನು ವೀಕ್ಷಿಸಿದ ಬಳಿಕ ಪಾತಕಿ ಕಸಬ್ ಚುಚ್ಚಿದವನಂತೆ ಕಾಣುತ್ತಿದ್ದ.
ಕಳೆದ ನವೆಂಬರ್ 26ರಂದು ಉಗ್ರರು ನಡೆಸಿದ ದಾಳಿಯ ವೇಲೆ ಸಿಎಸ್‌ಟಿ ರೈಲ್ವೇ ನಿಲ್ದಾಣದಲ್ಲಿ 52 ಮಂದಿ ಸಾವನ್ನಪ್ಪಿದ್ದು, 109 ಮಂದಿ ಗಾಯಗೊಂಡಿದ್ದಾರೆ. ರೈಲು ನಿಲ್ದಾಣದಲ್ಲಿ ಒಟ್ಟು 21 ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಆದರೆ ದುರಂತ ನಡೆದ ಆ ರಾತ್ರಿಯಂದು 15 ಕ್ಯಾಮರಾಗಳು ದುರಸ್ಥಿಯಾಗಿದ್ದು, ಕಾರ್ಯ ನಿರ್ವಹಿಸುತ್ತಿಲ್ಲ ಎಂದು ವಿಶೇಷ ನ್ಯಾಯಾಲಯಕ್ಕೆ ತಿಳಿಸಲಾಯಿತು.
ಕಟಕಟೆಯಲ್ಲಿ ಕುಳಿತಿದ್ದ ಕಸಬ್ ನ್ಯಾಯಾಲಯದಲ್ಲಿ ತೋರಿಸಲಾದ ದೃಶ್ಯಗಳನ್ನು ತದೇಕಚಿತ್ತದಿಂದ ವೀಕ್ಷಿಸುತ್ತಿದ್ದ. ಚಿಂತಾಕ್ರಾಂತನಂತೆ ಕಂಡು ಬಂದ ಆದ ಪದೇಪದೇ ಬಾಯಿಗೆ ಬೆರಳು ತೂರುತ್ತಿದ್ದ ಎಂದು ವರದಿಗಾರರು ಹೇಳಿದ್ದಾರೆ.
ರೈಲು ನಿಲ್ದಾಣದಲ್ಲಿ ರಾತ್ರಿ 9.41ಕ್ಕೆ ದಾಳಿ ಆರಂಭವಾಗಿತ್ತು. ನಿಲ್ದಾಣದಲ್ಲಿ ಕುಳಿತಿದ್ದ ಇಲ್ಲವೇ ಮೊಬೈಲು ಪೋನುಗಳಲ್ಲಿ ಮಾತನಾಡುತ್ತಿದ್ದ ಪ್ರಯಾಣಿಕರು, ಉಗ್ರರು ಹ್ಯಾಂಡ್ ಗ್ರೆನೇಡುಗಳನ್ನು ಎಸೆದು ಗುಂಡು ಹಾರಾಟ ಅರಂಭಿಸುತ್ತಲೇ ಯದ್ವಾತದ್ವಾ ಓಡಲು ಆರಂಭಿಸಿದರು.
ಖಾಕಿ ಸಮವಸ್ತ್ರ ಧರಿಸಿದ ಪೊಲೀಸರು ಕಂಬಗಳ ಹಿಂದಿನಿಂದ ಗುಂಡುಹಾರಿಸಲು ಪ್ರಯತ್ನಿಸುವ ದೃಶ್ಯಗಳು ದಾಖಲಾಗಿವೆ. ಸುಮಾರು 15 ಮೀಟರುಗಳ ದೂರದಲ್ಲಿ ಬೆನ್ನಿಗೆ ದೊಡ್ಡ ಬ್ಯಾಗನ್ನು ನೇತುಹಾಕಿಕೊಂಡು ನಸುಬಣ್ಣದ ಪ್ಯಾಂಟು ಹಾಗೂ ಗಾಢಬಣ್ಣದ ಟೀಶರ್ಟ್ ತೊಟ್ಟಿದ್ದ ಆಕೃತಿ ಹಲವಾರು ಫ್ರೇಮ್‌ಗಳಲ್ಲಿ ದಾಖಲಾಗಿದ್ದು, ಇದು ಕಸಬ್ ಎಂಬುದಾಗಿ ಪ್ರಾಸೆಕ್ಯೂಶನ್ ನ್ಯಾಯಾಲಯಕ್ಕೆ ಹೇಳಿದೆ. |