ಮುಂಬೈಮೇಲೆ ಉಗ್ರರು ದಾಳಿ ನಡೆಸಿದ ವೇಳೆ ಪೊಲೀಸರ ಲೋಪದೋಷಗಳನ್ನು ರಾಮ್‌ಪ್ರಧಾನ್ ಸಮಿತಿಯು ಪಟ್ಟಿಮಾಡಿದ್ದರೂ ಸರ್ಕಾರ ಇದನ್ನು ಮರೆಮಾಚುತ್ತಿದೆ ಎಂಬ ಆರೋಪವನ್ನು ತಳ್ಳಿಹಾಕಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚೌವಾಣ್, ಪೊಲೀಸರು ಉತ್ತಮ ಕಾರ್ಯನಿರ್ವಹಿಸಿದ್ದಾರೆ ಎಂದು ಹೇಳಿದ್ದಾರೆ.
ದಾಳಿಯವೇಳೆ ಮುಂಬೈ ಪೊಲೀಸರು ಕಾರ್ಯಾಚರಣೆ ಪ್ರಕ್ರಿಯೆ ಹಾಗೂ ವ್ಯವಸ್ಥಿತ ನೀತಿಗಳಲ್ಲಿ ವಿಫಲರಾಗಿದ್ದಾರೆ ಎಂದು ರಾಮ್ ಪ್ರಧಾನ್ ಸಮಿತಿ ಲೋಪವನ್ನು ಎತ್ತಿ ಹಿಡಿದಿತ್ತು.
100 ಪುಟಗಳ ಈ ವರದಿಯನ್ನು ಬಹಿರಂಗ ಪಡಿಸದಿರಲು ರಾಜ್ಯಸರ್ಕಾರ ನಿರ್ಧರಿಸಿದ್ದು, ಬದಲಿಗೆ ಕಾರ್ಯಕೈಗೊಂಡಿರುವ ವರದಿಯನ್ನು(ಎಟಿಆರ್) ಮಂಗಳವಾರ ಸದನದಲ್ಲಿ ಮಂಡಿಸಿತ್ತು.
ವರದಿಯಿಂದ ಅಡಗಿಡಿಸುವಂತಹುದು ಏನೂ ಇಲ್ಲ ಎಂಬುದಾಗಿ ಚೌವಾಣ್ ಅವರು ಖಾಸಗಿ ವಾಹಿನಿಯೊಂದರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.
"ಪೊಲೀಸರು ಉತ್ತಮ ಕಾರ್ಯವನ್ನು ಎಸಗಿದ್ದಾರೆ ಎಂದು ವರದಿ ಹೇಳಿದೆ. ಅದೊಂದು ಯುದ್ಧರೀತಿಯ ಪರಿಸ್ಥಿತಿಯಾಗಿದ್ದು, ಆ ಮಟ್ಟವನ್ನು ಎದುರಿಸಲು ಪೊಲೀಸರು ಸಿದ್ಧರಿರಲಿಲ್ಲ. ನಗರ ಪೊಲೀಸರು ಸಾಮಾನ್ಯವಾಗಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಸೂಕ್ತವಾಗಿಯೇ ನಿಭಾಯಿಸಿದ್ದಾರೆ. ಆದರೆ ಈ ಮಟ್ಟದ ಭಯೋತ್ಪಾದನಾ ಚಟುವಟಿಕೆಗಳನ್ನು ನಿಭಾಯಿಸಲು ಅವರು ತರಬೇತುಗೊಂಡಿಲ್ಲ" ಎಂದು ಅವರು ಹೇಳಿದ್ದಾರೆ.
ಮುಂಬೈದಾಳಿ ನಡೆದ ವೇಳೆ ಮುಂಬೈ ಪೊಲೀಸ್ ವರಿಷ್ಠರಾಗಿದ್ದ ಗಫೂರ್ ಅವರು ಪ್ರಧಾನ್ ಸಮಿತಿ ವರದಿಯ ಕುರಿತು ಬಹಿರಂಗವಾಗಿ ಟೀಕಿಸಿರುವುದಕ್ಕೆ ಅವರನ್ನು ಎತ್ತಂಗಡಿ ಮಾಡಲಾಗಿದೆ ಎಂಬ ಹೇಳಿಕೆಗಳನ್ನು ಮುಖ್ಯಮಂತ್ರಿಗಳು ಅಲ್ಲಗಳೆದಿದ್ದಾರೆ.
ಅವರಿಗೆ ಭಡ್ತಿ ಬಾಕಿಯಿತ್ತು, ಹಾಗೂ ಅವರ ಸ್ಥಾನಕ್ಕೆ ಶೀಘ್ರವೇ ನೇಮಕ ಮಾಡಲಾಗುವುದು. ವರದಿಯಲ್ಲಿ ಗಫೂರ್ ಅವರನ್ನು ನಿರ್ದಿಷ್ಟವಾಗಿ ಎಲ್ಲೂ ಬೆಟ್ಟು ಮಾಡಿಲ್ಲ ಎಂದು ಚೌವಾಣ್ ತಿಳಿಸಿದರು. |