ಲಾಲ್‌ಗರ್‌ನಲ್ಲಿ ಬುಡಕಟ್ಟು ಜನರ ಮೇಲೆ ಎಸಗಿರುವ ದೌರ್ಜನ್ಯಕ್ಕೆ ಕ್ಷಮೆಯಾಚಿಸಬೇಕು ಎಂದು ನಕ್ಸಲ್ ನಾಯಕ ಕಿಸಂಜಿ ಇಟ್ಟಿರುವ ಬೇಡಿಕೆಯನ್ನು ಪಶ್ಚಿಮ ಬಂಗಾಳ ಸರ್ಕಾರ ತಳ್ಳಿಹಾಕಿದೆ.
"ನಕ್ಸಲರೊಂದಿಗೆ ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ. ಅವರು ಕೊಲೆಗಳನ್ನು ಮಾಡಿದ್ದಾರೆ ಮತ್ತು ಲಾಲ್‌ಗರ್ ಹಾಗೂ ಇತರ ಪ್ರದೇಶಗಳಲ್ಲಿ ಹಿಂಸಾಚಾರ ನಡೆಸಿದ್ದಾರೆ. ಹೀಗಿರುವ ಇಂತಹ ಬೇಡಿಕೆಯನ್ನು ನಾವ್ಯಾಕೆ ಒಪ್ಪಬೇಕು" ಎಂದು ಪಶ್ಚಿಮಬಂಗಾಳ ಸರ್ಕಾರದ ಮುಖ್ಯಕಾರ್ಯದರ್ಶಿ ಅಶೋಕ್ ಮೋಹನ್ ಚಕ್ರವರ್ತಿ ಪ್ರಶ್ನಿಸಿದ್ದಾರೆ.
ನಕ್ಸಲರೊಂದಿಗೆ ಮಾತುಕತೆಗೆ ರಾಜ್ಯ ಸರ್ಕಾರ ಹಿಂಜರಿಯುವುದಿಲ್ಲ, ಚರ್ಚೆಗಾಗಿ ಈ ಹಿಂದೆ ಪ್ರಯತ್ನಗಳನ್ನು ಮಾಡಿರುವುದಾಗಿ ಅವರು ನುಡಿದರು. ಶಾಂತಿ ಮರುಸ್ಥಾಪನೆಗಾಗಿ ಮಾತುಕತೆಯ ಬಾಗಿಲುಗಳನ್ನು ಸರ್ಕಾರ ಮುಕ್ತವಾಗಿಸಿದೆ ಎಂದು ತಿಳಿಸಿದರು.
ವರ್ಷಗಳ ಕಾಲ ಬುಡಕಟ್ಟು ಜನಾಂಗಗಳ ಮೇಲೆ ದೌರ್ಜನ್ಯ ಎಸಗಿರುವುದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ಷಮೆಯಾಚಿಸಬೇಕು ಎಂಬುದಾಗಿ ಕಿಸನ್‌ಜಿ ಬೆಂಗಾಳಿ ಟಿವಿ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ಒತ್ತಾಯಿಸಿದ್ದ. |