ಇತ್ತೀಚೆಗಿನ ಮಹಾಚುನಾವಣೆಯಲ್ಲಿ ಸೋಲನುಭವಿಸಿದ ಮಾತ್ರಕ್ಕೆ ಪಕ್ಷದ ಸಿದ್ಧಾಂತವಾದ ಹಿಂದುತ್ವವನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂಬುದಾಗಿ ಹಿರಿಯ ಬಿಜೆಪಿ ನಾಯಕ ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ನಾಯ್ಡು, 'ಹಿಂದುತ್ವ ಸಿದ್ಧಾಂತ', ಸಮಾನ ನಾಗರಿಕ ಸಂಹಿತೆ ಮತ್ತು ಆರ್ಟಿಕಲ್ 370 ಮುಂತಾದ ವಿಚಾರದ ಕುರಿತು ಚುನಾವಣಾ ಸೋಲಿನ ಹಿನ್ನೆಲೆಯಲ್ಲಿ ಪಕ್ಷವು ಮರುವಿಮರ್ಷೆ ಮಾಡಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ನಾಯ್ಡು ಈ ಮೇಲಿನಂತೆ ಉತ್ತರಿಸಿದ್ದಾರೆ.
ಬಿಜೆಪಿ ಅಧ್ಯಕ್ಷ ರಾಜ್‌ನಾಥ್ ಸಿಂಗ್ ಮತ್ತು ಪಕ್ಷದ ಹಿರಿಯ ನಾಯಕ ಮುರಳಿ ಮನೋಹರ್ ಜೋಷಿ ಅವರು ಈಗಾಗಲೇ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿದ್ದು, ಪಕ್ಷವು ತನ್ನ ಸಿದ್ಧಾಂತವನ್ನು ಬಿಡುವುದಿಲ್ಲ ಮತ್ತು ಸಂಘಪರಿವಾರಗಳೊಂದಿಗೆ ಸಂಬಂಧ ಮುರಿದುಕೊಳ್ಳುವುದೂ ಇಲ್ಲ ಎಂದಿದ್ದಾರೆ.
ಅರೆಸ್ಸೆಸ್ ಸಂಘಟನೆಯನ್ನು 'ಸಾಂಸ್ಕೃತಿಕ ಮತ್ತು ರಾಷ್ಟ್ರೀಯ ಸಂಘಟನೆ ಎಂದು ಬಣ್ಣಿಸಿದ ಅವರು ಇದರೊಂದಿಗೆ ಬಿಜೆಪಿ ಶಾಶ್ವತ ಸಂಬಂಧ ಹೊಂದಿದೆ ಎಂದು ನುಡಿದರು. ಹಿಂದುತ್ವ ಎಂಬುದು ಒಂದು ರಾಜಕೀಯ ಅಥವಾ ಧಾರ್ಮಿಕ ವಿಚಾರವಲ್ಲ, ಅದು ತಲೆತಲಮಾರುಗಳಿಂದ ರಾಷ್ಟ್ರದಲ್ಲಿ ಅನುಸರಿಸಿಕೊಂಡು ಬಂದಿರುವ ಜೀವನ ಕ್ರಮ ಎಂದು ಬಿಜೆಪಿ ನಾಯಕ ನುಡಿದರು.
ಪಕ್ಷದ ನಾಯಕರಿಗೆ ಪಕ್ಷಾಧ್ಯಕ್ಷ ರಾಜನಾಥ್ ಸಿಂಗ್ ಅವರು ನೀಡಿರುವ ನಿರ್ದೇಶನದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅಧ್ಯಕ್ಷರು ಯಾವುದೇ ಆದೇಶ ನೀಡಿಲ್ಲ ಆದರೆ ಆಂತರಿಕ ವಿಚಾರಗಳ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸಬೇಕು ಎಂದು ಹೇಳಿದ್ದರು ಎಂದು ಸ್ಪಷ್ಟಪಡಿಸಿದರು. |