ಹಿಂಸಾಜರ್ಜರಿತ ಲಾಲ್‌ಗರ್ ಅನ್ನು 'ಮುಕ್ತವಲಯ' ಎಂದು ಘೋಷಿಸಿರುವ ನಕ್ಸಲರೊಂದಿಗೆ ತೃಣಮೂಲ ಕಾಂಗ್ರೆಸ್‌ಗೆ ಒಳಒಪ್ಪಂದವಿದೆ ಎಂಬುದಾಗಿ ಸಿಪಿಎಂ ಶುಕ್ರವಾರ ಗಂಭೀರವಾಗಿ ಆರೋಪಿಸಿದೆ.
ಪಾಲಿಟ್‌ಬ್ಯೂರೋ ಸಭೆಯ ಬಳಿಕ ನವದೆಹಲಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಿಪಿಎಂ ರಾಜ್ಯ ಕಾರ್ಯದರ್ಶಿ ಬಿಮನ್ ಬೋಸ್ ಅವರು ಮಾವೋವಾದಿಗಳು ಮತ್ತು ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್‌ಗೂ ಒಳಒಪ್ಪಂದವಿದೆ ಎಂದು ಆರೋಪಿಸಿದರು.
ಮಾವೋವಾದಿ ನಾಯಕ ಕಿಶನ್‌ಜಿಯ ಹೇಳಿಕೆಗಳು ಮಮತಾ ನೇತೃತ್ವದ ತೃಣಮೂಲ ಕಾಂಗ್ರೆಸ್ ಹಾಗೂ ಮಾವೋವಾದಿಗಳ ನಡುವಿನ ಒಪ್ಪಂದಕ್ಕೆ ಸಾಕ್ಷಿ ಎಂದು ಅವರು ನುಡಿದರು.
"ನಂದಿಗ್ರಾಮದಲ್ಲಿ ನಾವು ನೀಡಿದ ಸಹಾಯಕ್ಕೆ ಪ್ರತಿಯಾಗಿ ನಾವು ಮಮತಾರರ ಸಹಾಯ ಬಯಸುತ್ತಿದ್ದೇವೆ" ಎಂಬುದಾಗಿ ಪ್ರಮುಖ ಮಾವೋವಾದಿ ನಾಯಕ ಹೇಳಿರುವುದು ಸುದ್ದಿವಾಹಿನಿಗಳಲ್ಲಿ ಪ್ರಸಾರ ವಾಗಿರುವ ಬಳಿಕ ಸಿಪಿಎಂನ ಈ ಹೇಳಿಕೆ ಹೊರಬಿದ್ದಿದೆ.
ಬೃಂದಾ ಕಾರಟ್ ಆರೋಪ ರಾಜ್ಯದಲ್ಲಿ ಚುನಾಯಿತ ಎಡರಂಗ ಸರ್ಕಾರವನ್ನು ಅಸ್ಥಿರಗೊಳಿಸಲು ಮಮತಾ ಬ್ಯಾನರ್ಜಿ ನಕ್ಸಲರೊಂದಿಗೆ ಅಪವಿತ್ರ ಮೈತ್ರಿ ಹೊಂದಿದ್ದಾರೆ ಎಂದು ಸಿಪಿಎಂ ಪಾಲಿಟ್ ಬ್ಯೂರೋ ಸದಸ್ಯೆ ಬೃಂದಾ ಕಾರಟ್ ಗುರುವಾರ ಆಪಾದಿಸಿದ್ದರು. ಲಾಲ್‌ಗರ್‌ನ ಹಿಂಸಾಚಾರವನ್ನು ಪ್ರತಿಭಟಿಸಿ ನಡೆಸಲಾಗಿದ್ದ ಪ್ರತಿಭಟನಾ ರ‌್ಯಾಲಿಯನ್ನು ಉದ್ದೇಶಿ ಅವರು ಮಾತನಾಡುತ್ತಿದ್ದರು.
ತೃಣಮೂಲ ಕಾಂಗ್ರೆಸ್ ನಾಯಕಿ ಹಿಂದುಗಡೆಯಿಂದ ಹಿಂಸಾಚಾರವನ್ನು ಮುನ್ನಡೆಸುತ್ತಿದ್ದಾರೆ ಎಂದು ದೂರಿದ್ದ ಬೃಂದಾ, ಮಾವೋವಾದಿಗಳು ಮತ್ತು ತೃಣಮೂಲಿಗಳು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡಿಸಲು ಫಿತೂರಿ ನಡೆಸುತ್ತಿದ್ದು ನಮ್ಮ ಪಕ್ಷದ ಕಾರ್ಯಕರ್ತರನ್ನು ಕೊಲ್ಲುತ್ತಿದ್ದಾರೆ ಎಂದು ದೂರಿದರು. |