ಕಳೆದ ನವೆಂಬರ್ ತಿಂಗಳ 26ನೆ ತಾರೀಕಿನಂದು ನಡೆದಂತಹ ಭಯೋತ್ಪಾದನಾ ಘಟನೆಗಳೇನಾದರೂ ಮರುಕಳಿಸಿದರೆ ಅದನ್ನು ಎದುರಿಸಲು ನಾವು ಸಿದ್ಧರಿಲ್ಲ ಎಂಬುದಾಗಿ ರಾಮ್ ಪ್ರಧಾನ್ ಹೇಳಿದ್ದಾರೆ. ಮುಂಬೈಯಲ್ಲಿ ನಡೆದ ಉಗ್ರರ ದಾಳಿವೇಳೆ ಪೊಲೀಸರಿಂದ ಆಗಿರುವ ಲೋಪಗಳನ್ನು ತನಿಖೆ ನಡೆಸಲು ಸರ್ಕಾರವು ಸಮಿತಿಯೊಂದನ್ನು ನೇಮಿಸಿದ್ದು ರಾಮ್‌ಪ್ರಧಾನ್ ಅವರು ಸಮಿತಿಯ ಅಧ್ಯಕ್ಷರಾಗಿದ್ದಾರೆ.
ಸಿಎನ್ಎನ್-ಐಬಿಎನ್ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಅವರು ಇನ್ನೊಂದು ಇದಕ್ಕಿಂತಲೂ ಗಂಭೀರ ಸ್ವರೂಪದ ದಾಳಿ ನಡೆಯುವ ಕುರಿತು ಗುಪ್ತಚರ ಮಾಹಿತಿಗಳಿವೆ. ಆದರೆ ಅಂತಹ ಪರಿಸ್ಥಿತಿಗಳನ್ನು ಎದುರಿಸಲು ನಾವು ಸಿದ್ಧರಾಗಿದ್ದೇವೆ ಎಂದು ನನಗನಿಸುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಅಭಿಪ್ರಾಯಿಸಿದ್ದಾರೆ.
ತಾವು ಸಲ್ಲಿಸಿದ ವರದಿಯ ಒಂದು ಭಾಗವನ್ನೂ ಸರ್ಕಾರ ಸದನದಲ್ಲಿ ಮಂಡಿಸಿಲ್ಲ. ಸರ್ಕಾರವು ಕ್ರಮಕೈಗೊಳ್ಳಲು ಉದ್ದೇಶಿಸಿರುವ ಭಾಗವನ್ನು ಮಂಡಿಸಿದ ಅದನ್ನು ಸರ್ಕಾರವು ಎಟಿಆರ್(ಕಾರ್ಯಕೈಗೊಳ್ಳಬೇಕಿರುವ ವರದಿ) ಎಂದು ಕರೆದಿದೆ ಎಂದವರು ನುಡಿದರು.
"ವ್ಯವಸ್ಥೆಯಲ್ಲಿ ಎಲ್ಲವೂ ಹೇಗಿರಬೇಕಿತ್ತೋ ಹಾಗಿಲ್ಲ. ಎಲ್ಲವೂ ಸರಿಯಾಗಿದೆ ಅಥವಾ ಎಲ್ಲವೂ ಸರಿಯಾಗಿಲ್ಲ ಎಂಬುದಾಗಿ ನಾನು ಸರ್ಟಿಫಿಕೇಟ್ ನೀಡುವುದಿಲ್ಲ. ಆದರೆ ಆಗಬೇಕಿರುವುದು ತುಂಬ ಇದೆ. ಎಟಿಆರ್‌ನಲ್ಲಿ ಹೇಳಲಾಗಿರುವ ವಿಚಾರಗಳನ್ನು ಶ್ರೇಷ್ಠ ಮಟ್ಟದಲ್ಲಿ ಮತ್ತು ಶೀಘ್ರವಾಗಿ ಅಳವಡಿಸದೇ ಇದ್ದಲ್ಲಿ ಸದ್ಯವೇ ನಾವು ಇನ್ನೂ ಗಂಭೀರವಾದ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು. ನಾವು ಇದನ್ನು ಎದುರಿಸಲು ಸಿದ್ಧವಾಗಿದ್ದೇವೆ ಎಂದು ನನಗನಿಸುವುದಿಲ್ಲ" ಎಂಬುದಾಗಿ ಅವರು 26/11ರಂತಹ ಘಟನೆಗಳನ್ನು ಎದುರಿಸಲು ವ್ಯವಸ್ಥೆಗಳು ಸೂಕ್ತವಾಗಿವೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಅಭಿಪ್ರಾಯಿಸಿದ್ದಾರೆ. |