ಶಸ್ತ್ರಾಸ್ತ್ರ ಕೆಳಗಿಟ್ಟು ಮಾತುಕತೆಗೆ ಮುಂದಾಗಿ ಎಂದು ಪಶ್ಚಿಮ ಬಂಗಾಳದ ಲಾಲ್‌ಗರ್‌ನ ಮವೋವಾದಿಗಳಿಗೆ ಕೇಂದ್ರ ಸರ್ಕಾರ ಹೇಳಿದೆ.ಮಾತುಕತೆಗೆ ಬರುವಂತೆ ಮಾವೋವಾದಿಗಳು ಮತ್ತು ಬುಡಕಟ್ಟು ಜನತೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಬುದ್ಧದೇವ್ ಮಾಡಿರುವ ಮನವಿಯನ್ನು ತಾನು ದೃಢಪಡಿಸಿರುವುದಾಗಿ ಕೇಂದ್ರ ಗೃಹಸಚಿವ ಪಿ.ಚಿದಂಬರಂ ಹೇಳಿದ್ದಾರೆ." ನಾನು ಮನವಿಯನ್ನು ಅಂಗೀಕರಿಸುತ್ತೇನೆ. ಮಾತುಕತೆ ಬಯಸಿದರೆ ಅವರು ಇದಕ್ಕಾಗಿ ಮುಂದೆ ಬರಬೇಕು. ಮಾತುಕತೆಗಳಿಗೆ ಅನುಕೂಲ ಕಲ್ಪಿಸಲು ನಾವು ಸಂತಸಪಡುತ್ತೇವೆ" ಎಂಬುದಾಗಿ ಅವರು ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ನುಡಿದರು.ಸಮಯ ತೆಗೆದುಕೊಳ್ಳಬಹುದು ಪೊಲೀಸರು ಮತ್ತು ಅರೆಸೇನಾ ಪಡೆಗಳು ಪ್ರಸಕ್ತ ನಡೆಸುತ್ತಿರುವ ಕಾರ್ಯಾಚರಣೆಯು ಸಂಪೂರ್ಣಗೊಳ್ಳಲು ಹೆಚ್ಚು ಸಮಯ ಹಿಡಿಯಬಹುದು ಮತ್ತು ಪಡೆಗಳು 'ಅನಿರೀಕ್ಷಿತ'ವಾದುದನ್ನು ನಿರೀಕ್ಷಿಸಬೇಕು ಎಂದು ಸಚಿವರು ಹೇಳಿದ್ದಾರೆ." ಪ್ರಗತಿಯು ನಿಧಾನವಾಗಬಹುದು. ಅವರು (ಪಡೆಗಳು ಪ್ರಗತಿ ಸಾಧಿಸುತ್ತಿದ್ದಾರೆ. ಇದುವರೆಗೆ ಕಾರ್ಯಾಚರಣೆಯು ಯೋಜನೆಯಂತೆ ಸಾಗುತ್ತಿದೆ ಆದರೆ ಅವರು ಅನಿರೀಕ್ಷಿತವಾದವುಗಳಿಗೆ ಸಿದ್ಧರಾಗಿರಬೇಕು. ನಾವು ನೀಡಿರುವ ಸಲಹೆಯ ಪ್ರಕಾರದಂತೆ ಕಾರ್ಯಾಚರಣೆಯು ಯಶಸ್ವಿಯಾಗಲಿದೆ ಎಂಬುದಾಗಿ ತಾನು ಪ್ರಾಮಾಣಿಕವಾಗಿ ನಂಬಿದ್ದೇನೆ" ಎಂಬುದಾಗಿ ಚಿದು ನುಡಿದರು." ಇಂತಹ ಕಾರ್ಯಾಚರಣೆಗೆ ಒಂದಿಷ್ಟು ಸಮಯ ಹಿಡಿಯುತ್ತದೆ. ನಿರೀಕ್ಷೆಗಿಂತ ಹೆಚ್ಚಿನ ಸಮಯ ತೆಗೆದುಕೊಳ್ಳಬಹುದು" ಎಂಬುದಾಗಿ ಲಾಲ್‌ಗರ್‌ನ ಪರಿಸ್ಥಿತಿಯ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.ರಕ್ಷಣಾ ಪಡೆಗಳು ಎಚ್ಚರಿಕೆಯಿಂದ ಸಂಚರಿಸುತ್ತಿವೆ. ಇದೀಗ ನಡೆಯುತ್ತಿರುವ ಕಾರ್ಯಾಚರಣೆಯು ನಕ್ಸಲರ ವಿರುದ್ಧ ಮಾತ್ರವೇ ಹೊರತು ಬುಡಕಟ್ಟು ಜನಾಂಗದವರ ಮೇಲಲ್ಲ ಎಂದು ಗೃಹಸಚಿವರು ಸ್ಪಷ್ಟ ಪಡಿಸಿದ್ದಾರೆ. |