ದೆಹಲಿಯಲ್ಲಿ ಇತ್ತೀಚೆಗೆ ಸಿಕ್ಕಿಬಿದ್ದಿರುವ ಲಷ್ಕರ್-ಇ-ತೋಯ್ಬಾದ ಪ್ರಮುಖ ನಾಯಕ ಮೊಹಮ್ಮದ್ ಒಮರ್ ಮದನಿಯು ಉಗ್ರವಾದಿ ಕೃತ್ಯಗಳಿಗಾಗಿ ನಕ್ಸಲರ ನಂಟು ಬೆಳೆಸಲಾಗಿದೆ ಎಂಬ ಆಘಾತಕಾರಿ ವಿಚಾರವನ್ನು ಹೊರಗೆಡಹಿದ್ದಾನೆ. ಜಾರ್ಖಂಡ್‌ನಲ್ಲಿ ಕಾರ್ಯಾಚರಿಸುತ್ತಿರುವ ನಕ್ಸಲರೊಂದಿಗೆ ಲಷ್ಕರೆಗೆ ಸಂಪರ್ಕವಿದೆ ಎಂದು ಆತ ವಿಚಾರಣೆಯ ವೇಳೆಗೆ ಹೇಳಿದ್ದಾನೆ.
ದಕ್ಷಿಣ ದೆಹಲಿಯ ಕುತುಬ್ ಮಿನಾರ್ ಪ್ರದೇಶದಲ್ಲಿ ಈತನನ್ನು ಮಿಂಚಿನ ಕಾರ್ಯಾಚರಣೆಯಲ್ಲಿ ದೆಹಲಿ ಪೊಲೀಸರು ಜೂನ್ 4ರಂದು ಬಂಧಿಸಿದ್ದರು.
ನ್ಯಾಯಾಂಗ ಬಂಧನ ವಿಸ್ತರಣೆ ಇದೆ ವೇಳೆ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮನೀಶ್ ಯದುವಂಶಿ ಅವರು ಮದನಿಯ ಪೊಲೀಸ್ ವಶವನ್ನು ಮತ್ತೆ ಏಳು ದಿನಕ್ಕೆ ವಿಸ್ತರಿಸಿದ್ದಾರೆ. ಹಾಗಾಗಿ ಆತ ಪೊಲೀಸ್ ಬಂಧನ ಜೂನ್ 26ರ ತನಕ ವಿಸ್ತರಣೆ ಗೊಂಡಿದೆ. ಈ ಹಿಂದೆ ಆತನ್ನು 14 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಲಾಗಿತ್ತು.
ಮದನಿಯು ಲಷ್ಕರೆ ಸಂಘಟನೆಗಳಿಗೆ ಯುವಕರನ್ನು ನೇಮಿಸಿಕೊಳ್ಳುತ್ತಿದ್ದ ಮತ್ತು ನೇಮಕಗೊಂಡವರಿಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ತರಬೇತು ಒದಗಿಸುತ್ತಿದ್ದ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.
ಈತ ನಕ್ಸಲರೊಂದಿಗೆ ಸಂಪರ್ಕ ಕುರಿತ ಮಾಹಿತಿ ನೀಡಿದ್ದು ಮತ್ತಷ್ಟು ತನಿಖೆಗಾಗಿ ಆತನ ಪೊಲೀಸ್ ವಶವನ್ನು ವಿಸ್ತರಿಸಬೇಕು ಎಂಬುದಾಗಿ ಪೊಲೀಸರು ನ್ಯಾಯಾಲಯವನ್ನು ವಿನಂತಿಸಿದ್ದರು. ಇದಲ್ಲದೆ ಆತನ ಇಮೇಲ್ ಅಕೌಂಟ್ ಮತ್ತು ಹಣಕಾಸು ವಹಿವಾಟಿನ ಕುರಿತೂ ವಿವರಣೆ ಪಡೆಯಬೇಕಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
|