ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆ ಅವರು ಹಲವಾರು ವರ್ಷಗಳಿಂದ ಮುಸ್ಲಿಂವಿರೋಧಿ ಧೋರಣೆ ತಾಳಿದ್ದಾರೆ. ಮತ್ತು ಸಮಯ ಸಂದರ್ಭ ಸಿಕ್ಕಿದಾಗಲೆಲ್ಲ ಮುಸ್ಲಿಮರನ್ನು ಟೀಸುತ್ತಲೇ ಬಂದಿದ್ದಾರೆ. ಆದರೆ ಮೊನ್ನೆ ಗುರುವಾರ ಅವರು ಉಸಿರಾಟದ ತೊಂದರೆ ಅನುಭವಿಸಿದಾಗ ಅವರ ಸಹಾಯಕ್ಕೆ ಧಾವಿಸಿ ಪ್ರಥಮ ಚಿಕಿತ್ಸೆ ನೀಡಿದ್ದು ಇಬ್ಬರು ಮುಸ್ಲಿಂ ವೈದ್ಯರು. ಲೀಲಾವತಿ ಆಸ್ಪತ್ರೆಯ ವೈದ್ಯರಾದ ಜಲೀಲ್ ಪಾರ್ಕರ್ ಮತ್ತು ಸಮದ್ ಅನ್ಸಾರಿ ಅವರು ಠಾಕ್ರೆ ಅವರ ಮಾತೋಶ್ರಿ ನಿವಾಸಕ್ಕೆ ಧಾವಿಸಿ ಚಿಕಿತ್ಸೆ ನೀಡಿದ ಬಳಿಕ ಅಂಬ್ಯುಲೆನ್ಸ್‌ನಲ್ಲಿ ಕರೆತಂದು ತುರ್ತು ನಿಗಾ ಘಟಕಕ್ಕೆ ದಾಖಲಿಸಿದ್ದಾರೆ.ಠಾಕ್ರೆ ಅವರು ಅನಾರೋಗ್ಯ ಪೀಡಿತರಾದಂದಿನಿಂದ ಅವರು ನಿಕಟ ವೈದ್ಯಕೀಯ ಪರಿವೀಕ್ಷಣೆಯಲ್ಲಿದ್ದಾರೆ ಎಂದು ಹೇಳಿರುವ ಡಾ. ಪಾರ್ಕರ್, "ನಾನು ಅವರನ್ನು ದಿನನಿತ್ಯ ತಪಾಸಣೆ ಮಾಡುತ್ತೇನೆ. ಕೆಲವೊಮ್ಮೆ ಮಾತೋಶ್ರೀಗೆ ದಿನಕ್ಕೆ ಎರಡು ಭೇಟಿ ನೀಡುತ್ತೇನೆ. ಗುರುವಾರ ಮಧ್ಯಾಹ್ನ ನಾನು ಅವರನ್ನು ಪರೀಕ್ಷಿಸಿದ್ದು ಅವರು ಚೆನ್ನಾಗಿದ್ದರು. ಸುಮಾರು 8.30ರ ವೇಳೆಗೆ ಕರೆಮಾಡಿದಾಗ ಅವರು ಅತಿಥಿಗಳೊಂದಿಗೆ ಕುಳಿತಿರುವುದಾಗಿ ಹೇಳಿಲಾಗಿತ್ತು. ಆದರೆ 9.30ರ ವೇಳೆಗೆ ಅವರು ಉಸಿರಾಟದ ತೊಂದರೆ ಅನುಭವಿಸುತ್ತಿರುವುದಾಗಿ ಹೇಳಲಾಯಿತು"" ತಕ್ಷಣ ನಾನು ಹಾಗೂ ಸಮದ್ ಅನ್ಸಾರಿ ಅವರು ಬಾಂದ್ರಾದಲ್ಲಿರುವ ಅವರ ನಿವಾಸಕ್ಕೆ ಧಾವಿಸಿದೆವು. ಅವರ ರಕ್ತದೊತ್ತಡ ಏರಿತ್ತು ಮತ್ತು ಹೃದಯಬಡಿತವು ಏರಿತ್ತು. ಅಲ್ಲದೆ ಆಕ್ಸಿಜನ್ ಮಟ್ಟವು ಕಡಿಮೆಯಾಗಿತ್ತು. ನಾವು ಅವರಿಗೆ ಚುಚ್ಚುಮದ್ದು ನೀಡಿ, ಆಕ್ಸಿಜನ್ ನೀಡಿದೆವು. ಇದೇ ವೇಲೆ ಡಾ. ಅನಿಲ್ ರಾಮ್ನಾನಿ ಅವರು ಆಸ್ಪತ್ರೆಯಿಂದ ಅಂಬ್ಯುಲೆನ್ಸ್ ಕಳುಹಿಸಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಿದೆವು" ಎಂದು ತಿಳಿಸಿದ್ದಾರೆ. |