ಜಸ್ವಂತ್ ಸಿಂಗ್ ಅವರ ವಿವಾದಾಸ್ಪದ ಪತ್ರವು ಮಾಧ್ಯಮಗಳಿಗೆ ಸೋರಿಕೆಯಾಗಿರುವ ಕುರಿತು ಶುಕ್ರವಾರ ನಡೆದ ಬಿಜೆಪಿ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ವಿನಯ್ ಕತಿಯಾರ್ ಮತ್ತು ಹಿರಿಯ ನಾಯಕ ಜಸ್ವಂತ್ ಸಿಂಗ್ ನಡುವೆ ಬಿಸಿಬಿಸಿ ಚರ್ಚೆ ನಡೆಯಿತು.
ಕಳೆದ ಪಕ್ಷದ ಕೋರ್ ಸಮಿತಿ ಸಭೆಯ ವೇಳೆ ವಿತರಿಸಿದ ಪತ್ರವು ಮಾಧ್ಯಮಗಳಿಗೆ ಹೇಗೆ ಸೋರಿಕೆಯಾಯಿತು ಎಂಬುದಾಗಿ ಪ್ರಶ್ನಿಸಿದರು. ಪತ್ರದಲ್ಲಿ ಇತರ ವಿಚಾರಗಳೊಂದಿಗೆ, ಕಾರ್ಯಕ್ಷಮತೆ ಮತ್ತು ಪ್ರತಿಫಲದ ನಡುವೆ ಸಂಪರ್ಕವಿರಬೇಕು ಎಂಬುದಾಗಿ ಒತ್ತಾಯಿಸಲಾಗಿತ್ತು.
"ತನ್ನ 44 ವರ್ಷಗಳ ರಾಜಕೀಯ ವೃತ್ತಿಯಲ್ಲಿ ವಿಶ್ವಾಸರ್ಹತೆಯ ಕುರಿತು ಯಾರೂ ನನ್ನನ್ನು ಇದುವರೆಗೆ ಪ್ರಶ್ನಿಸಿಲ್ಲ" ಎಂಬುದಾಗಿ ಜಸ್ವಂತ್ ಅವರು ಕತಿಯಾರ್‌ಗೆ ತಿರುಗೇಟು ನೀಡಿದರು. ಅಲ್ಲದೆ ನಾನು ಯಾರಿಗೂ ಉತ್ತರಿಸಬೇಕಿಲ್ಲ ಎಂದೂ ಆವರು ಹೇಳಿದರು.
ಇದೇ ವೇಳೆ ವರುಣ್ ಗಾಂಧಿ ಮಾಡಿರುವ ದ್ವೇಷಭಾಷಣದ ಕುರಿತು ಪಕ್ಷವು ಮೌನವಹಿಸಿದೆ ಎಂಬ ಕುರಿತು ಪಕ್ಷದ ಉಪಾಧ್ಯಕ್ಷ ಮುಕ್ತಾರ್ ಅಬ್ಬಾಸ್ ನಕ್ವಿ ಹಾಗೂ ಮೊಹಮ್ಮದ್ ಶಾನವಜ್ ಅವರು ತಮ್ಮ ಅಸಮಾಧಾನ ತೋಡಿಕೊಂಡರು.
ರಾಂಪುರ ಕ್ಷೇತ್ರದಲ್ಲಿ ಸೋಲನ್ನಪ್ಪಿರುವ ನಕ್ವಿ ಕೋಪೋದ್ರಿಕ್ತರಾಗಿದ್ದು, ವರುಣ್ ಅವರನ್ನು ರಾಜ್‌ನಾಥ್ ಸಿಂಗ್ ಜೈಲಿನಲ್ಲಿ ಭೇಟಿ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಪಕ್ಷವು ಎಲ್ಲಾ ವರ್ಗಗಳು ಮತ್ತು ಸಂಘಟನೆಗಳನ್ನು ಒಟ್ಟಾಗಿ ಕೊಂಡೊಯ್ಯಬೇಕು ಅವರಿಬ್ಬರು ಹೇಳಿದರು.
ತಾವು ಮುಸ್ಲಿಂ ಬಾಹುಳ್ಯದ ಕ್ಷೇತ್ರಗಳಲ್ಲಿ ಸಮಸ್ಯೆಗಳನ್ನು ಎದುರಿಬೇಕಾಯಿತು ಎಂಬುದಾಗಿಯೂ ದೂರಿದ ಅವರಿಬ್ಬರು ತಾವು ಪಕ್ಷಕ್ಕೆ ನಿಷ್ಟರಾಗಿದ್ದೇವೆ ಎಂದು ನುಡಿದರು. ಪಕ್ಷದ ಮೌನವು, ಅದು ವರುಣ್ ಗಾಂಧಿಗೆ ಬೆಂಬಲ ನೀಡುತ್ತಿರುವುದನ್ನು ಸೂಚಿಸುತ್ತದೆ ಎಂದು ಈ ಇಬ್ಬರು ನಾಯಕರು ದೂರಿದ್ದಾರೆ. ಪಶ್ಚಿಮ ಉತ್ತರ ಪ್ರದೇಶದಲ್ಲಿ ಬಿಜೆಪಿಯು ಹಲವಾರು ಕ್ಷೇತ್ರಗಳನ್ನು ಸೋತಿದ್ದು ಇವುಗಳೆಲ್ಲ ಮುಸ್ಲಿಂ ಬಾಹುಳ್ಯದ ಕ್ಷೇತ್ರಗಳಾಗಿದ್ದು ಇದಕ್ಕೆ ರಾಹುಲ್ ಭಾಷಣವೇ ಕಾರಣ ಎಂದು ಪಕ್ಷದ ಒಂದು ವರ್ಗ ಭಾವಿಸಿದೆ.
ಪಕ್ಷವು ದೀನದಯಾಳ್ ಉಪಾಧ್ಯಾಯರ ಮಾನವೀಯತೆ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ಮೌಲ್ಯಗಳನ್ನು ಅನುಸರಿಸುತ್ತಿದೆ ಆದರೆ ಪ್ರಸಕ್ತ ಬಿಜೆಪಿಯು ಯಾವ ಬಗೆಯ ಹಿಂದುತ್ವವನ್ನು ಅನುಸರಿಸುತ್ತಿದೆ ಎಂಬುದು ಸ್ಪಷ್ಟವಿಲ್ಲ ಎಂಬುದಾಗಿ ನಕ್ವಿ ಹೇಳಿದ್ದಾರೆನ್ನಲಾಗಿದೆ.
|