ವೆಬ್‌ಚಾಟ್ ಒಂದು, ಒಬ್ಬಾಕೆ ಮಹಿಳೆ ಹಾಗೂ ಆಕೆಯ ಮಗುವಿನ ಪ್ರಾಣ ಉಳಿಸಿದ ಕುತೂಹಲಕಾರಿ ಅಪರೂಪದ ಘಟನೆ ವರದಿಯಾಗಿದೆ. ಕೇರಳದ ಮಹಿಳೆ ಕೆನಡಾದಲ್ಲಿರುವ ತನ್ನ ಅತ್ತಿಗೆಯೊಂದಿಗೆ ವೆಬ್‌ಚಾಟ್ ಮಾಡುತ್ತಿರುವ ವೇಳೆಗೆ, ಕೆನಡಾದ ಮನೆಯೊಳಗೆ ಪ್ರವೇಶಿಸಿದ ಚಾಕುಹಿಡಿದ ಆಗಂತುಕನೊಬ್ಬ ಪ್ರವೇಶಿಸುವುದನ್ನು ಕಂಡು ಸಮಯಪ್ರಜ್ಞೆ ಮೆರೆದು ಮಹಿಳೆ ಮತ್ತು ಮಗುವಿನ ಜೀವ ಉಳಿಸಿದ್ದಾರೆ.
ಇದೆಲ್ಲ ನಡೆದುದು ಹೀಗೆ ಕೋಜಿಕೋಡ್‌ನ ಆಶಾ ಮಡತಿಲ್ ಎಂಬವರು ಜೂನ್ 16ರಂದು ಕೆನಡಾದ ಟೊರಂಟೋದಲ್ಲಿರುವ ತನ್ನ ಅತ್ತಿಗೆ ಪೂರ್ಣಿಮಾರೊಂದಿಗೆ ವೆಬ್‌ಚಾಟ್ ಮಾಡುತ್ತಿದ್ದರು. ಮಾತುಕತೆ ನಡೆಯುತ್ತಿದ್ದ ವೇಳೆಗೆ ಆಶಾ ಅವರು ಕರೆಗಂಟೆ ಸದ್ದನ್ನು ಕೇಳಿಸಿಕೊಂಡರು, ಬಳಿಕ ಕೈಯಲ್ಲಿ ಚಾಕು ಹಿಡಿದಿದ್ದ ಆಗಂತುಕನನ್ನು ಕಂಡು ಕಿರುಚಿದನ್ನು ಕೇಳಿದರು.
ಕೆಲವು ಕ್ಷಣ ಆಶಾರಿಗೆ ಏನೂ ಮಾಡಬೇಕು ಎಂಬುದು ತೋರಲಿಲ್ಲ. ಆದರೆ ತಕ್ಷಣ ಚೇತರಿಸಿಕೊಂಡ ಅವರು ತನ್ನ ಸಮಯಸ್ಫೂರ್ತಿ ಮೆರೆದು ಪೂರ್ಣಿಮಾರ ಅಂಕಲ್‌ಗೆ ಪೂರ್ಣಿಮಾರ ಪರಿಸ್ಥಿತಿಯ ಕುರಿತು ಮಾಹಿತಿ ನೀಡಿದರು. ಬಳಿಕ ಅವರು ಸೂಕ್ತ ಕ್ರಮ ಕೈಗೊಂಡು ಪೂರ್ಣಿಮಾ ಹಾಗೂ ಅವರ ಎಂಟರ ಹರೆಯ ಮಗುವಿನ ಪ್ರಾಣ ಉಳಿಸಿದ್ದಾರೆ.
ಆಶಾ ಅವರು ಪಿಟಿಐನೊಂದಿಗೆ ಘಟನೆಯನ್ನು ಈ ರೀತಿಯಾಗಿ ವಿವರಿಸಿದ್ದಾರೆ. "ವೆಬ್ ಕ್ಯಾಮಾರವು ಮುಖ್ಯಬಾಗಿಲಿನತ್ತ ಮುಖಮಾಡಿದ್ದ ಕಾರಣ ತನಗೆ ಎಲ್ಲವೂ ಕಾಣುತ್ತಿತ್ತು. ಕರೆಗಂಟೆ ಕೇಳಿದ ತಕ್ಷಣ ಪೂರ್ಣಿಮಾ ಅವರು ಬಾಗಿಲು ತೆರೆದರು. ಕಪ್ಪು ಟಿಶರ್ಟ್ ಹಾಗೂ ಪ್ಯಾಂಟ್ ಧರಿಸಿದ್ದ ವ್ಯಕ್ತಿಯೊಬ್ಬ ಅಪಾರ್ಟ್‌ಮೆಂಟ್‌ನೊಳಗೆ ನುಗ್ಗಿ, ಪೂರ್ಣಿಮಾರನ್ನು ಎಳೆದು ರೂಮಿಗೆ ಒಯ್ದ. ಪೂರ್ಣಿಮಾ ಮಗುವಿನೊಂದಿಗೆ ಸಹಾಯಕ್ಕಾಗಿ ಕಿರುಚುತ್ತಿದ್ದರು".
"ಬೆಲೆ ಬಾಳುವ ವಸ್ತುಗಳನ್ನು ನೀಡುವಂತೆ ಆತ ಪೂರ್ಣಿಮಾರನ್ನು ಬೆದರಿಸಿದ. ಅಸಹಾಯಕಿ ಪೂರ್ಣಿಮಾ ಎರಡು ಲ್ಯಾಪ್‌ಟಾಪ್‌ಗಳು ಮತ್ತು ಕ್ಯಾಮರಾವನ್ನು ನೀಡಿದರು. ಆತ ಬೆಲೆಬಾಳುವ ವಸ್ತುಗಳಿಗಾಗಿ ಅಪಾರ್ಟ್‌ಮೆಂಟ್‌ನಲ್ಲಿ ಹುಡುಕಾಟ ನಡೆಸಿದ್ದು, ಮಗು ಮತ್ತು ಪೂರ್ಣಿಮಾರನ್ನು ಕೊಲ್ಲುವ ಬೆದರಿಕೆ ಹಾಕಿದ" ಎಂಬುದಾಗಿ ಆಶಾ ಹೇಳಿದ್ದಾರೆ. |