ಗುಜರಾತ್ ಸರ್ಕಾರದ ಭಯೋತ್ಪಾದನಾ ವಿರೋಧಿ ಕಾನೂನಿಗೆ ತಿದ್ದುಪಡಿ ಮಾಡಲು ಸೂಚಿಸಿರುವ ಕೇಂದ್ರದ ಸಲಹೆಗಳನ್ನು ತಿರಸ್ಕರಿಸಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಹಾಗೆ ಮಾಡಿದರೆ ಶಾಸನದ 'ಹಲ್ಲು ಮತ್ತು ಉಗುರು'ಗಳನ್ನು ಕಿತ್ತಂತೆ ಎಂದು ಹೇಳಿದ್ದಾರೆ.
"ಕೇಂದ್ರ ಸರ್ಕಾರವು ಸಲಹೆ ಮಾಡಿರುವ ತಿದ್ದುಪಡಿಗಳು ಸಂಘಟಿತ ಅಪರಾಧಗಳ ಗುಜರಾತ್ ನಿಯಂತ್ರಣ ಕಾಯ್ದೆಯ(GUJCOCA) ಹಲ್ಲು ಮತ್ತು ಉಗುರುಗಳನ್ನು ಕಿತ್ತಂತೆ" ಎಂಬುದಾಗಿ ಅವರು ನುಡಿದರು. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯ ಪಾರ್ಶ್ವದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಅವಶ್ಯಕತೆ ಬಿದ್ದರೆ ಗುಜರಾತ್ ಸರ್ಕಾರವು ಮಸೂದೆಯನ್ನು ಮರಳಿ ವಿಧಾನಸಭೆಗೆ ಪಡೆಯಲಿದೆ ಎಂದು ಅವರು ನುಡಿದರು. ಸಂಘಟಿತ ಅಪರಾಧಗಳ ವಿರುದ್ಧ ಹೋರಾಡಲು ಕೇಂದ್ರವು ನೀಡಿರುವ ಮಾರ್ಗಸೂಚಿಯ ಆಧಾರದಲ್ಲಿ ಗುಜರಾತ್ ವಿಧಾನಸಭೆಯು ಈ ಮಸೂದೆಯನ್ನು ಅಂಗೀಕರಿಸಿದೆ ಎಂಬುದಾಗಿ ಅವರು ನುಡಿದರು.
ಕೇಂದ್ರ ಸರ್ಕಾರವು ಗುಜರಾತ್ ಕೋಕಾ ಕಾಯ್ದೆಯನ್ನು ಅಂಗೀಕರಿಸದೆ ಮೂರು ತಿದ್ದುಪಡಿಗಳನ್ನು ಮಾಡುವಂತೆ ಮಸೂದೆಯನ್ನು ಮರಳಿ ರಾಜ್ಯಕ್ಕೆ ಕಳುಹಿಸಲು ನಿರ್ಧರಿಸಿರುವುದಾಗಿ ಶುಕ್ರವಾರ ಹೇಳಿತ್ತು. ಗುಜರಾತ್ ಸರ್ಕಾರ ಅಂಗೀಕರಿಸಿರುವ ಈ ಮಸೂದೆಯನ್ನು ರಾಷ್ಟ್ರಪತಿಯವರ ಅಂಗೀಕಾರಕ್ಕಾಗಿ ಕಳುಹಿಸಲಾಗಿತ್ತು.
ಗುಜರಾತ್ ಕೋಕಾವು, ಮೋಕಾ(ಸಂಘಟಿತ ಅಪರಾಧಗಳ ಗುಜರಾತ್ ನಿಯಂತ್ರಣ ಕಾಯ್ದೆ)ದ 'ಜೆರಾಕ್ಸ್ ಪ್ರತಿ' ಎಂದು ಸಮರ್ಥಿಸಿಕೊಂಡ ನರೇಂದ್ರ ಮೋದಿ, ಯುಪಿಎ ಸರ್ಕಾರವು ತನ್ನ ಇಡಿಯ ಐದು ವರ್ಷದಲ್ಲಿ ಈ ಮಸೂದೆ ಕುರಿತು ಒಂದು ನಿರ್ಧಾರ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಆಪಾದಿಸಿದರು. ಮಹಾರಾಷ್ಟ್ರದಲ್ಲಿ ಮೋಕಾ ಜಾರಿಯಲ್ಲಿದೆ. |