ಮಾವೋವಾದಿಗಳು ವಶಪಡಿಸಿಕೊಂದಿದ್ದ ಲಾಲ್‌ಗರ್ ಪ್ರದೇಶವನ್ನು ಮರುವಶಪಡಿಸಿಕೊಂಡಿರುವುದಾಗಿ ಪೊಲೀಸರು ಶನಿವಾರ ತಿಳಿಸಿದ್ದಾರೆ. ಕಳೆದ ನವೆಂಬರ್‌ನಿಂದ ಮಾವೋವಾದಿಗಳು ವಶಪಡಿಸಿಕೊಂಡಿದ್ದ ಲಾಲ್‌ಗರ್ ಪೊಲೀಸ್ ಠಾಣೆಯನ್ನು ಭದ್ರತಾ ಪಡೆಗಳು ತಲುಪಿದ್ದು, ಹೆಚ್ಚಿನ ಪ್ರತಿರೋಧ ಇಲ್ಲದಂತೆ ವಶಪಡಿಸಿಕೊಂಡಿದ್ದಾರೆ.
ನೆಲಬಾಂಬ್ ತಡೆ ವಾಹನ ಹಿಂದಿನಿಂದ ಗುಂಡುನಿರೋಧಕ ಜಾಕಿಟ್ ಧರಿಸಿದ್ದ ನೂರಾರು ಪೊಲೀಸರು ಕೋಲ್ಕತಾದಿಂದ 170 ಕಿಲೋಮೀಟರ್ ದೂರವಿರುವ ಲಾಲ್‌ಗರ್ ತಲುಪಿದರು.
"ನಮ್ಮ ಪಡೆಗಳು ಲಾಲ್‌ಗರನ್ನು ಹೆಚ್ಚಿನ ಪ್ರತಿರೋಧವಿಲ್ಲದೆ ತಲುಪಿವೆ. ಇಡಿ ಪ್ರದೇಶವನ್ನು ಬಂಡುಕೋರರಿಂದ ಮುಕ್ತವಾಗಿಸುವ ಚಳುವಳಿಯಲ್ಲಿ ನಾವಿದ್ದೇವೆ" ಎಂಬುದಾಗಿ ರಾಜ್ಯ ಐಜಿಪಿ ರಾಜ್ ಕನೋಜಿಯಾ ಹೇಳಿದ್ದಾರೆ.
ಪಟ್ಟಣದಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿ ನಕ್ಸಲರು ನಾಲ್ಕು ಶಿಬಿರಗಳನ್ನು ರೂಪಿಸಿದ್ದಾರೆ ಎಂದು ಹೇಳಲಾಗಿದ್ದು, ಪೊಲೀಸ್ ಅದರತ್ತ ಚಲಿಸಲಿದೆ ಎಂದು ಅವರು ಹೇಳಿದ್ದಾರೆ.
"ನಾವು ನಮ್ಮ ಕಾರ್ಯವನ್ನು ಪೂರ್ಣಗೊಳಿಸಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಸ್ಥಾಪಿಸುತ್ತೇವೆ. ಹಾಗಾಗಿ ಜನತೆಯು ಭಯಮುಕ್ತರಾಗಿ ಬದುಕಬಹುದು" ಎಂಬುದಾಗಿ ಕಾರ್ಯಾಚರಣೆಯ ಅಧಿಕಾರ ವಹಿಸಿರುವ ಪೊಲೀಸ್ ಅಧಿಕಾರಿ ಪ್ರವೀಣ್ ಕುಮಾರ್ ವರದಿಗಾರರಿಗೆ ತಿಳಿಸಿದ್ದಾರೆ.
ರಾಷ್ಟ್ರಾದ್ಯಂತ ತಮ್ಮ ಪ್ರಭಾವವನ್ನು ವಿಸ್ತರಿಸಿಕೊಳ್ಳುತ್ತಿರುವ ನೂರಾರು ಮಾವೋವಾದಿಗಳು ಕಳೆದವಾರಗಳಲ್ಲಿ ಪೊಲೀಸರನ್ನು ಓಡಿಸಿದ್ದು, ಲಾಲ್‌ಗರ್ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸರ್ಕಾರಿ ಬೆಂಬಲಿಗರನ್ನು ಕೊಂದು ಹಾಕಿದ್ದಾರೆ. ಲಾಲ್‌ಗರ್ ಪ್ರದೇಶವನ್ನು ನಕ್ಸಲರು ಮುಕ್ತವಲಯ ಎಂದು ಘೋಷಿಸಿದ್ದಾರೆ. |