ವರದಕ್ಷಿಣೆ ದೌರ್ಜನ್ಯ ಪ್ರಕರಣ ಒಂದರಲ್ಲಿ, ನ್ಯಾಯಹೇಳುವ ನ್ಯಾಯಾಧೀಶರೇ ಬಂಧನಕ್ಕೀಡಾಗಿರುವ ಘಟನೆ ಆಂಧ್ರಪ್ರದೇಶದಲ್ಲಿ ಸಂಭವಿಸಿದೆ. ನ್ಯಾಯಾಧೀಶರಾದ ಅಪ್ಪ-ಮಗ ಇಬ್ಬರಿಗೂ ಸ್ಥಳೀಯ ನ್ಯಾಯಾಲಯ ಒಂದು ನ್ಯಾಯಾಂಗ ಬಂಧನ ವಿಧಿಸಿದೆ.
ಅನಂತಪುರದಲ್ಲಿ ಜೂನಿಯರ್ ಸಿವಿಲ್ ಜಡ್ಜ್ ಟಿ. ಕಿರಣ್ ಕುಮಾರ್ ಹಾಗೂ ಮೆಹಬೂಬಾ ನಗರದಲ್ಲಿ ಜಿಲ್ಲಾ ನ್ಯಾಯಾಧೀಶರಾಗಿರುವ ಟಿ. ನರಸಿಂಹ ರಾವ್ ಇಬ್ಬರ ವಿರುದ್ಧ ಕಿರಣ್ ಕುಮಾರ್ ಅವರ ಪತ್ನಿ ಟಿ. ಶಶಿಕಲ ಅವರು ವರದಕ್ಷಿಣೆಕೇಸು ದಾಖಲಿಸಿರುವುದಾಗಿ ಡಿಸಿಪಿ(ಪತ್ತೇದಾರಿ ಇಲಾಖೆ) ಪ್ರವೀಣ್ ಕುಮಾರ್ ಶನಿವಾರ ತಿಳಿಸಿದ್ದಾರೆ.
ಕಿರಣ್ ಕುಮಾರ್ ತಾಯಿ ಹಾಗೂ ಈ ಇಬ್ಬರು ಸೇರಿದಂತೆ ಮೂವರನ್ನು ಬಂಧಿಸಲಾಗಿದ್ದು, ಅವರನ್ನು ನಾಂಪಲ್ಲಿ ಕ್ರಿಮಿನಲ್ ಕೋರ್ಟಿನಲ್ಲಿ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಶಶಿಕಲಾ ಅವರು ಕಿರಣ್ ಕುಮಾರ್ ಅವರನ್ನು 2005ರಲ್ಲಿ ವಿವಾಹವಾಗಿದ್ದರು. ತನ್ನ ಪತಿ ಹಾಗೂ ಪತಿಮನೆಯವರ ವಿರುದ್ಧ ಸೆಂಟ್ರಲ್ ಕ್ರೈಮ್ ಸ್ಟೇಶನ್‌ನ ಮಹಿಳಾ ಪೊಲೀಸ್ ಸ್ಟೇಶನ್‌ನಲ್ಲಿ ದೂರು ದಾಖಲಿಸಿದ್ದರು.
ವಿವಾಹದ ಎರಡು ವರ್ಷಗಳ ಬಳಿಕ ತನ್ನ ಪತಿಯ ಮನೆಯವರು ಹೆಚ್ಚಿನ ವರದಕ್ಷಿಣೆಗೆ ಒತ್ತಾಯಿಸಿ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ. |