ಇತ್ತೀಚೆಗೆ ನಡೆದ ಮಹಾ ಚುನಾವಣೆ ವೇಳೆ ತನ್ನ ಕ್ಷೇತ್ರ ಪಿಲಿಭಿತ್‌ನಲ್ಲಿ ವರುಣ್ ಗಾಂಧಿ ಮಾಡಿರುವ ದ್ವೇಷಭಾಷಣದ ಸಿಡಿಯನ್ನು ತಿರುಚಲಾಗಿಲ್ಲ ಎಂದು ಫಾರೆನ್ಸಿಕ್ ತಜ್ಞರು ಹೇಳುವ ಮೂಲಕ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಬಿಜೆಪಿಗೆ ಮತ್ತೊಂದು ಹಿನ್ನಡೆ ಉಂಟಾಗಿದೆ. ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿಯ ಮಹತ್ವದ ಸಭೆ ನಡೆಯುತ್ತಿರುವಾಗಲೇ ಈ ವಿಚಾರ ಹೊರಬಿದ್ದಿದೆ.ಹೈದರಾಬಾದಿನ ವಿಧಿವಿಜ್ಞಾನ ಪ್ರಯೋಗಾಲಯವು ತನ್ನ ವರದಿಯನ್ನು ಪಿಲಿಭಿತ್‌ನ ಜಿಲ್ಲಾ ದಂಡಾಧಿಕಾರಿಯವರಿಗೆ ಸಲ್ಲಿಸಿದೆ ಎಂದು ಮೂಲಗಳು ಹೇಳಿವೆ.ನಾನು ಮುಸ್ಲಿಮರ ವಿರುದ್ಧ ಅವಹೇಳನಕಾರಿಯಾಗಿ ಮಾತಾಡಿಯೇ ಇಲ್ಲ, ತನ್ನ ಭಾಷಣವನ್ನು ತಿರುಚಲಾಗಿದೆ ಎಂಬುದಾಗಿ ವರುಣ್ ಗಾಂಧಿ ವಾದಿಸಿದ್ದರು. ಅಲ್ಲದೆ, ಈ ರಂಪದ ಕುರಿತು ಬಿಜೆಪಿಯು ಇದನ್ನೇ ತನ್ನ ಅಧಿಕೃತ ನಿಲುವನ್ನಾಗಿಸಿತ್ತು. ಈ ಮಧ್ಯೆ, ಪರೀಕ್ಷೆಗಾಗಿ ತನ್ನ ಧ್ವನಿಯ ಮಾದರಿಯನ್ನು ನೀಡಲೂ ವರುಣ್ ನಿರಾಕರಿಸಿದ್ದರು.ಪ್ರಸಕ್ತ ಜಾಮೀನಿನ ಮೇಲೆ ಹೊರಗಿರುವ ವರುಣ್ ಗಾಂಧಿ ವಿರುದ್ಧ ಆರು ಎಫ್ಐಆರ್‌ಗಳು ದಾಖಲಾಗಿವೆ. |