ಸಿಆರ್ಪಿಎಫ್ ಸಿಬ್ಬಂದಿಗಳು ಪ್ರಯಾಣಿಸುತ್ತಿದ್ದ ಟ್ರಕ್ ಅನ್ನು ನಕ್ಸಲರು ಸ್ಫೋಟಿಸಿದ ಪರಿಣಾಮ 11 ಮಂದಿ ಸಾವನ್ನಪ್ಪಿದ್ದು, ಇತರ 11 ಮಂದಿ ಗಾಯಗೊಂಡಿರುವ ಘಟನೆ ಚತ್ತೀಸ್ಗಢದ ದಾಂತೆವಾಡ ಜಿಲ್ಲೆಯಲ್ಲಿ ಸಂಭವಿಸಿದೆ.ಇಲ್ಲಿಂದ ಸುಮಾರು 375 ಕಿಲೋ ಮೀಟರ್ ದೂರದಲ್ಲಿರುವ ಕೋಕನಗರ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂಬುದಾಗಿ ಡಿಜಿಪಿ ವಿಶ್ವರಂಜನ್ ಪಿಟಿಐಗೆ ತಿಳಿಸಿದ್ದಾರೆ.ಗಸ್ತು ತಿರುಗಾಡಲು ತೆರಳಿದ್ದ ಸಿಬ್ಬಂದಿಗಳನ್ನು ಟ್ರಕ್ನಲ್ಲಿ ವಾಪಾಸ್ ಕರೆತರಲಾಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ. 53 ಮಂದಿಯ ಪೊಲೀಸ್ ಹಾಗೂ ಸಿಆರ್ಪಿಎಫ್ನ ಜಂಟಿ ತಂಡವು ರಸ್ತೆ ಕಾಮಗಾರಿ ನಡೆಯುತ್ತಿರುವ ಕೋಕಾನಗರ ಗ್ರಾಮದಲ್ಲಿ ಉಗ್ರರು ಟ್ರಕ್ ಒಂದನ್ನು ಸುಟ್ಟುಹಾಕಿದ್ದಾರೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಈ ತಂಡವು ಗಸ್ತು ತಿರುಗಲು ತೆರಳಿತ್ತು.ಗಸ್ತು ಕಾರ್ಯ ಮುಗಿಸಿ ಈ ಪಡೆಗಳು ಎರಡು ಟ್ರಕ್ ಹಾಗೂ ಒಂದು ಜೀಪಿನಲ್ಲಿ ಮರಳುತ್ತಿದ್ದ ವೇಳೆ ನಕ್ಸಲರು ಹೊಂಚು ದಾಳಿ ನಡೆಸಿದ್ದಾರೆ. ಟ್ರಕ್ಕನ್ನು ಸ್ಫೋಟಿಸಿದ್ದು, ಭದ್ರತಾ ತಂಡದೊಂದಿಗೆ ಗುಂಡಿನ ಕಾಳಗ ನಡೆಸಿದರು ಎಂದು ಡಿಜಿಪಿ ಹೇಳಿದ್ದಾರೆ. |