ಪ್ರವಾದಿ ಮೊಹಮ್ಮದರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ವಿವಾದ ಎದುರಿಸುತ್ತಿರುವ ಬಾಲಿವುಡ್ ಕಿಂಗ್ ಖಾನ್ ಶಾರೂಕ್ ವಿರುದ್ಧ ಎರಡು ಮುಸ್ಲಿಂ ಧಾರ್ಮಿಕ ಕೇಂದ್ರಗಳು ಫತ್ವಾ ಹೊರಡಿಸಿವೆ.ಇದಕ್ಕೂ ಮುಂಚಿತವಾಗಿ ಮುಸ್ಲಿಮರ ತಂಡ ಒಂದು, ಶಾರೂಖ್ ವಿರುದ್ಧ ಪ್ರತಿಭಟನೆ ನಡೆಸಿದ್ದು, ಶಾರೂಕ್ ಅವರ ಪ್ರತಿಕೃತಿ ದಹನ ಮಾಡಿತ್ತು. ದಾರುಲ್-ಉಲೂಮ್ ಮಜೆಹರ್ ಇಸ್ಲಾಮ್‌ನ ಮುಫ್ತಿ ಮೊತಿಯುರ್ ರೆಹ್ಮಾನ್ ರಿಜ್ವಿ ಹಾಗೂ ಇನ್ನೊಂದು ಸಂಘಟನೆಯ ಮುಫ್ತಿ ಮೊಹಮ್ಮದ್ ಸುಯೆಬ್ ರಾಜಾ ಕದ್ರಿ ಅವರುಗಳು ಪ್ರತ್ಯೇಕ ಫತ್ವಾಗಳನ್ನು ಹೊರಡಿಸಿದ್ದಾರೆ. ಪೈಗಂಬರ್ ವಿರುದ್ಧ ಹೇಳಿಕೆ ನೀಡಿರುವ ಶಾರೂಕ್ ಇಸ್ಲಾಂನಲ್ಲಿ ಇರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.ಇದಲ್ಲದೆ, ಶಾರೂಕ್ ಪತ್ನಿಯ 'ನಿಖಾ'ವನ್ನೂ ಸಹ ಕಾನೂನು ಬಾಹಿರ ಹಾಗೂ ಆಕೆಯೊಂದಿಗೆ ಆತನ ಸಂಬಂಧವೂ ನ್ಯಾಯಯುತವಾದುದು ಅಲ್ಲ ಎಂದು ಅವರು ಹೇಳಿದ್ದಾರೆ. ಶಾರೂಕ್ ಖಾನ್ ತಕ್ಷಣವೇ ಸಾರ್ವಜನಿಕ ಕ್ಷಮೆಯಾಚಿಸಬೇಕು ಇಲ್ಲವಾದರೆ ಅವರಿಗೆ ಸ್ಮಶಾನದಲ್ಲಿ ಸ್ಥಳ ಸಿಕ್ಕದು ಎಂದು ಫತ್ವಾದಲ್ಲಿ ಹೇಳಲಾಗಿದೆ.ಪ್ರವಾದಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಶಾರೂಕ್ ವಿರುದ್ಧ ಮುಂಬೈಯಲ್ಲಿ ಇದೀಗಾಗಲೇ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ. ಶಾರೂಕ್ ಖಾನ್ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಪ್ರವಾದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆಪಾದಿಸಲಾಗಿದೆ. ಆದರೆ ಶಾರೂಕ್ ಇದನ್ನು ತಳ್ಳಿಹಾಕಿದ್ದು, "ಇದೊಂದು ಬರಹದ ತಪ್ಪು ಅಷ್ಟೆ. ಇದು ನನ್ನ ನಂಬುಗೆ, ಅಭಿಪ್ರಾಯವಲ್ಲ" ಎಂದು ಹೇಳಿದ್ದಾರೆ. ಸಂದರ್ಶನ ಪ್ರಕಟಿಸಿದ ಪತ್ರಿಕೆಯೂ ಒಪ್ಪೊಲೆಯನ್ನು ಮುದ್ರಿಸಿತ್ತು. |