ಮಾವೋವಾದಿಗಳ ಆಕ್ರಮಣವನ್ನು ಹಿಮ್ಮೆಟ್ಟಿಸಲು ಭದ್ರತಾ ಪಡೆಗಳು ಹೋರಾಟ ನಡೆಸುತ್ತಿರುವ ಲಾಲ್‌ಗರ್‌ನಲ್ಲಿ ಪರಿಸ್ಥಿತಿ 'ಸೂಕ್ಷ್ಮ' ಮತ್ತು 'ಉದ್ವಿಗ್ನ'ವಾಗಿದೆ ಎಂದು ಗೃಹಸಚಿವ ಪಿ.ಚಿದಂಬರಂ ಭಾನುವಾರ ಹೇಳಿದ್ದಾರೆ. ಅಲ್ಲದೆ ಬಿಕ್ಕಟ್ಟಿನ ಸ್ಥಳಗಳಿಗೆ ಹೋಗದಿರಲು ರಾಜಕೀಯ ನಾಯಕರಿಗೆ ಸಲಹೆ ಮಾಡಿದ್ದಾರೆ.
"ಲಾಲ್‌ಗರ್‌ನಲ್ಲಿ ಪರಿಸ್ಥಿತಿ ಸೂಕ್ಷ್ಮವಾಗಿದೆ ಮತ್ತು ಉದ್ವಿಗ್ನವಾಗಿ ಮುಂದುವರಿದಿದೆ" ಎಂದು ನುಡಿದ ಅವರು ನಕ್ಸಲ್ ಪೀಡಿತ ಐದುರಾಜ್ಯಗಳಾದ ಬಿಹಾರ್, ಚತ್ತೀಸ್‌ಗಢ, ಜಾರ್ಖಂಡ್, ಒರಿಸ್ಸಾ ಮತ್ತು ಪಶ್ಚಿಮ ಬಂಗಾಳದಲ್ಲಿ ಮಾವೋವಾದಿಗಳು ಸೋಮವಾರದಿಂದ ಎರಡುದಿನಗಳ ರಾಜ್ಯಬಂದ್‌ಗೆ ಕರೆ ನೀಡಿರುವುದನ್ನು ಅವರು ಪ್ರಸ್ತಾಪಿಸಿದರು.
"ಜನರು ಅದರಲ್ಲೂ ವಿಶೇಷವಾಗಿ ರಾಜಕೀಯ ನಾಯಕರು ಮತ್ತು ಎನ್‌ಜಿಓಗಳವರು ಹಿಂಸಾಪೀಡಿತ ಪ್ರದೇಶಕ್ಕೆ ತೆರಳಬಾರದು" ಎಂಬುದಾಗಿ ಸಚಿವರು ನೀಡಿರುವ ಹೇಳಿಕೆಯಲ್ಲಿ ವಿನಂತಿಸಲಾಗಿದೆ. ಭದ್ರತಾ ಪಡೆಗಳು ಯಾವುದೇ ಅಡೆತಡೆಗಳಿಲ್ಲದೆ ತಮ್ಮ ಕಾರ್ಯವನ್ನು ನಡೆಸಲು ಅವಕಾಶ ಕಲ್ಪಿಸಬೇಕು ಎಂಬುದಾಗಿ ಅವರು ಹೇಳಿದ್ದಾರೆ.
ಲಾಲ್‌ಗರ್ ಪೊಲೀಸ್ ಠಾಣೆಯನ್ನು ವಶಪಡಿಸಿಕೊಂಡಿರುವ ಭದ್ರತಾಪಡೆಗಳು, ಮಾವೋವಾದಿಗಳು ವಶಪಡಿಸಿಕೊಂಡಿರುವ ಇತರ 17 ಗ್ರಾಮಗಳನ್ನು ಬಿಡಿಸಿಕೊಳ್ಳುವತ್ತ ಮುನ್ನುಗ್ಗಿದ್ದಾರೆ. ಈ ಪ್ರದೇಶಗಳು ನಕ್ಸಲರ ಪ್ರಭಾವದ ಪ್ರದೇಶಗಳಾಗಿದ್ದು, ಇಲ್ಲಿ ಅವರಿಗೆ ಬುಡಕಟ್ಟು ಜನಾಂಗವು ಬೆಂಬಲ ನೀಡುತ್ತಿದೆ. ಕಾರ್ಯಾಚರಣೆ ವೇಳೆ ನಾಲ್ವರು ನಕ್ಸಲರು ಸಾವನ್ನಪ್ಪಿದ್ದಾರೆ. |