ಜನನಿಬಿಡ ಬಸ್ಸಲ್ಲಿ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ ನಾಲ್ವರನ್ನು ಪ್ರತಿಭಟಿಸಿದ 22ರ ಹರೆಯದ ಯುವತಿಯ ಮುಖವನ್ನು ಚೂರಿಯಿಂದ ಇಳಿದು, ಆಕೆಯ ಬಳಿಯಿದ್ದ ಬೆಲೆಬಾಳುವ ವಸ್ತುಗಳನ್ನು ಅಪಹರಿಸಿ ಯುವಕರು ಪರಾರಿಯಾಗಿರುವ ಘಟನೆ ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.
ಈ ಯುವತಿಯು ಕೆಲಸ ಮುಗಿಸಿ ರಾತ್ರಿ ಎಂಟು ಗಂಟೆ ವೇಳೆ ಮನೆಗೆ ಮರಳುತ್ತಿದ್ದಳು. ನಾಲ್ವರು ಆರೋಪಿಗಳಲ್ಲಿ ಒಬ್ಬಾತ ಆಕೆಯ ಪಕ್ಕ ಬಂದು ಕುಳಿತರೆ ಮತ್ತೆ ಮೂವರು ಆಕೆಯ ಸುತ್ತ ನಿಂತಿದ್ದರು. ಅವರು ಅಶ್ಲೀಲವಾಗಿ ಮಾತನಾಡಿದ್ದಲ್ಲದೆ ಆಕೆಗೆ ಕಿರುಕುಳ ನೀಡಲಾರಂಭಿಸಿದರು. ಆಕೆ ಇದನ್ನು ಪ್ರತಿಭಟಿಸಿದಾಗ ಇವರಲ್ಲೊಬ್ಬ ಚೂರಿಯಿಂದ ಆಕೆಯ ಎಡಕೆನ್ನೆಗೆ ಪದೇಪದೇ ಇರಿದು ಘಾಸಿಗೊಳಿಸಿದ. ಇಷ್ಟುಮಾತ್ರವಲ್ಲದೆ, ಆಕೆಯ ಬ್ಯಾಗನ್ನು ಕಸಿದು ಅದರಲ್ಲಿದ್ದ ಸೆಲ್‌ಫೋನ್ ಎಗರಿಸಿ ಬಲವಂತದಿಂದ ಬಸ್ಸು ನಿಲ್ಲಿಸಿ ಪರಾರಿಯಾದರು ಎಂದು ಪೊಲೀಸರು ತಿಳಿಸಿದ್ದಾರೆ.
ಸಹಪ್ರಯಾಣಿಕರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಗಾಯಗೊಂಡ ಯುವತಿಯನ್ನು ಗರು ತೆಗ್ ಬಹಾದ್ದೂರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಮುಖಕ್ಕೆ ಹಲವಾರು ಹೊಲಿಗೆಗಳನ್ನು ಹಾಕಲಾಗಿದೆ. ಆಕೆಯ ಆರೋಗ್ಯಸ್ಥಿತಿ ಸ್ಥಿರವಾಗಿದ್ದರೂ, ಇರಿತದಿಂದಾಗಿ ಆಕೆಯ ಮುಖ ಶಾಶ್ವತವಾಗಿ ವಿರೂಪವಾಗಬಹುದು ಎಂದು ಪೊಲೀಸರು ಹೇಳಿದ್ದಾರೆ.
ನೆಹರೂ ಪ್ಲೇಸ್ ಮತ್ತು ನಂದ್ ನಾಗ್ರಿ ನಡುವೆ ಬಸ್ ಓಡಾಡುತ್ತಿತ್ತು. ಆಕೆ ಶಹದರದಲ್ಲಿರುವ ತನ್ನ ಮನೆಗೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಸುಮಾರು 25ರ ಆಸುಪಾಸಿನ ನಾಲ್ವರು ದುರುಳರು ಜಫಿರಾಬಾದಿನಲ್ಲಿ ಬಸ್ಸಿಗೆ ಏರಿದರೆಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಸೀಲಾಂಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಬಲಿಪಶು ಯುವತಿ ಹಾಗೂ ಬಸ್ಸಿನ ಚಾಲಕ ಹಾಗೂ ನಿರ್ವಾಹಕನ ಸಹಾಯದಿಂದ ಕಿಡಿಗೇಡಿಗಳ ಸ್ಕೆಚ್ ರಚಿಸಲಾಗುತ್ತಿದ್ದು, ಅವರನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. |