ಜೂನಿಯರ್ ಕಾಲೇಜು ಅಥವಾ ಹನ್ನೊಂದನೆ ತರಗತಿಯ ಶೇ.90 ಸ್ಥಾನಗಳನ್ನು ಎಸ್ಎಸ್‌ಸಿ ಅಥವಾ ರಾಜ್ಯಮಂಡಳಿ ವಿದ್ಯಾರ್ಥಿಗಳಿಗೆ ಮೀಸಲಿಟ್ಟಿರುವ ಮಹಾರಾಷ್ಟ್ರ ಸರ್ಕಾರದ ಕ್ರಮಕ್ಕೆ ಇತರ ವಿದ್ಯಾರ್ಥಿಗಳು ರೊಚ್ಚಿಗೆದ್ದಿದ್ದಾರೆ.
"ಈ ವರ್ಷದಿಂದ ಜೂನಿಯರ್ ಕಾಲೇಜು ಪ್ರವೇಶಕ್ಕೆ 90-10 ಕೋಟಾವನ್ನು ಜಾರಿಗೆ ತರಲು ನಾವು ನಿರ್ಧರಿದ್ದೇವೆ" ಎಂಬುದಾಗಿ ಮಹಾರಾಷ್ಟ್ರ ಶಿಕ್ಷಣ ಸಚಿವ ರಾಧಾಕೃಷ್ಣ ವಿಕೆ ಪಾಟೀಲ್ ಅವರು ಘೋಷಿಸಿದ್ದಾರೆ.
ಅವರ ಈ ಹೇಳಿಕೆಯು ಮಹಾರಾಷ್ಟ್ರದಲ್ಲಿ ಇನ್ನೊಂದು ಮೀಸಲಾತಿ ವಿವಾದವನ್ನು ಹುಟ್ಟುಹಾಕಿದೆ. ಕೇವಲ ಶೇ.10ರಷ್ಟು ಸೀಟುಗಳಲ್ಲಿ ಸ್ಥಾನ ಪಡೆದುಕೊಳ್ಳಲು ಇತರ ಮಂಡಳಿಯ ವಿದ್ಯಾರ್ಥಿಗಳು ಬಡಿದಾಡಬೇಕಾಗಿದೆ.
ಐಸಿಎಸ್ಇ ಮಂಡಳಿಯ ವಿದ್ಯಾರ್ಥಿ ನಿಮೋಯ್ ಹಾಗೂ ಆತನ ತಂದೆ ಸಂಜಯ್ ಖೇರ್ ಅವರು ಈ ತೀರ್ಪಿನ ವಿರುದ್ಧ ಬಾಂಬೆ ಹೈಕೋರ್ಟಿನಲ್ಲಿ ಹೋರಡಲು ನಿರ್ಧರಿಸಿದ್ದಾರೆ. ಸ್ವತಹ ವಕೀಲರಾಗಿರುವ ಖೇರ್ ಅವರು ಇದು ಸಂವಿಧಾನದ ವಿಧಿ 14ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹೇಳುತ್ತಾರೆ.
ಆದರೆ ಎಸ್ಎಸ್‌ಸಿ ವಿದ್ಯಾರ್ಥಿಗಳು, ಪ್ರಸಕ್ತ ಪ್ರವೇಶ ನೀತಿಯು ನ್ಯಾಯೋಚಿತವಲ್ಲ, ಯಾಕೆಂದರೆ ಪ್ರಸಕ್ತ ಪದ್ಧತಿಯಲ್ಲಿ ಇತರ ಮಂಡಳಿಯ, ಉದಾಹರಣೆಗೆ ಐಸಿಎಸ್ಇ ಮಂಡಳಿಯ ವಿದ್ಯಾರ್ಥಿಗಳು ಹೆಚ್ಚು ಅಂಕಗಳನ್ನು ಪಡೆಯುತ್ತಾರೆ ಎಂದು ಅವರು ಹೇಳುತ್ತಾರೆ.
ಇತರ ಮಂಡಳಿಗಳ ಹೆಚ್ಚಿನ ವಿದ್ಯಾರ್ಥಿಗಳು ಶೇ.90-95ರಷ್ಟು ಅಂಕಗಳನ್ನು ಗಳಿಸುತ್ತಾರೆ. ಇವರು ಹೆಚ್ಚಿನ ಸ್ಥಾನಗಳನ್ನು ಕಬಳಿಸುವ ಕಾರಣ ಅತ್ಯಧಿಕ ಅಂಕ ಪಡೆದ ಎಸ್ಎಸ್‌ಸಿ ಮಕ್ಕಳು ದ್ವಿತೀಯ ಅಥವಾ ತೃತೀಯ ಕಟ್ ಆಫ್‌ಗಾಗಿ ಕಾಯಬೇಕು ಎಂಬುದಾಗಿ ಎಸ್ಎಸ್‌ಸಿ ವಿದ್ಯಾರ್ಥಿನಿಯೊಬ್ಬಾಕೆಯ ತಾಯಿ ಅನುರಾಧ ಪಟವರ್ಧನ್ ಹೇಳುತ್ತಾರೆ.
ಜೂನ್ 25ರಂದು ರಾಜ್ಯ ಸರ್ಕಾರವು ಎಸ್ಎಸ್‌ಸಿ ಫಲಿತಾಂಶಗಳನ್ನು ಘೋಷಿಸಲಿದ್ದು, ಪ್ರವೇಶ ಪ್ರಕ್ರಿಯೆ ಚಾಲನೆಗೆ ಬರಲಿದೆ.
ಎರಡೂ ಬದಿಯ ವಿದ್ಯಾರ್ಥಿಗಳು ಮತ್ತು ಹೆತ್ತವರು ವಾದವಿವಾದ ಮಾಡುತ್ತಿದ್ದು, ಎಸ್ಎಸ್‌ಸಿಯೇತರ ಸುಮಾರು 15,000 ವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಪ್ರಕರಣ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದೆ. |