ಮುಂಬೈ ದಾಳಿ ಪ್ರಕರಣದ ವಿಚಾರಣೆ ನಡೆಯುತ್ತಿರುವ ವೇಳೆ ಕೆಲವೊಮ್ಮೆ ನಗುವ ಪ್ರಮುಖ ಆರೋಪಿ ಕಸಬ್‌ನಿಗೆ ವಕೀಲರು ಛೀಮಾರಿ ಹಾಕಿದ್ದಾರೆ. ಗಂಭೀರವಾಗಿರು, ಇಲ್ಲವಾದರೆ ದಾರಾಸಿಂಗನ್ನು ಕರೀತೆನೆ ಎಂಬುದಾಗಿ ನ್ಯಾಯಾಲಯದಲ್ಲಿ ಇತ್ತೀಚೆಗೆ ವಕೀಲರೊಬ್ಬರು ಕಸಬ್‌ನನ್ನು ಎಚ್ಚರಿಸಿದ ಘಟನೆ ನಡೆಯಿತು.ನ್ಯಾಯಾಲಯಲ್ಲಿ ವಕೀಲರು ಹಾರಿಸಿದ ಹಾಸ್ಯಚಟಾಕಿಗೆ ಕಸಬ್ ನಗುತ್ತಿದ್ದ. ಅಷ್ಟರಲ್ಲಿ ಆತನತ್ತ ತಿರುಗಿದ ಸರಕಾರಿ ವಕೀಲರಾಗಿರುವ ಉಜ್ವಲ್ ನಿಕಮ್ ಅವರು "ನಗ್ಬೇಡ. ಗಂಭೀರವಾಗಿರು. ಇಲ್ಲವಾದರೆ ದಾರಾಸಿಂಗ್‌ನನ್ನು ಕರೀತೆನೆ ನೋಡು" ಅಂದರು. (ದಾರಾಸಿಂಗ್ ಭಾರತದ ಕುಸ್ತಿಪಟು. ಮಕ್ಕಳನ್ನು ಸುಮ್ಮನಾಗಿಸಲು ಹೆತ್ತವರು ಆಗೀಗ ದಾರಾಸಿಂಗ್ ಹೆಸರೆತ್ತುತ್ತಾರೆ.) ಆದರೆ ಕಸಬ್ ಮತ್ತಷ್ಟು ನಗಲಾರಂಭಿಸಿದ. ಕೆಲವೊಮ್ಮೆ ವಕೀಲರು ಆತನೊಂದಿಗೆ ಹಾಸ್ಯಚಟಾಕಿ ಹಾರಿಸುತ್ತಾರೆ ಮತ್ತು ಆತನಿಗೆ 'ಗಿಡ್ಡ' ಎಂಬ ಅಡ್ಡಹೆಸರು ಇರಿಸಿದ್ದಾರೆ.ರೈಲು ನಿಲ್ದಾಣದಲ್ಲಿ ದಾಳಿನಡೆಸಿದ ವೇಳೆ ತೆಗೆಯಲಾದ 27 ಪೋಟೋಗಳನ್ನು ಕಳೆದ ಸೋಮವಾರ ನ್ಯಾಯಾಲಯದಲ್ಲಿ ಪ್ರದರ್ಶಿಸಲಾಯಿತು. ಇದರಲ್ಲಿ ಕಾರ್ಗೋ ಪ್ಯಾಂಟು ತೊಟ್ಟು ಕಪ್ಪು ಚಿ ಶರ್ಟ್ ಧರಿಸಿ ಬೆನ್ನಮೇಲೆ ನೀಲಿಬಣ್ಣದ ಬ್ಯಾಕ್‌ಪ್ಯಾಕ್ ಹೇರಿಕೊಂಡಿದ್ದ ಕಸಬ್ ಎಕೆ-47 ಹಿಡಿದಿದ್ದ ಕಸಬ್‍ನನ್ನು ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ಗುರುತಿಸಿದರು.ಫೋಟೋಗಳನ್ನು ನೋಡಿದ ಕಸಬ್ ತಲೆಕೆಳಗೆ ಹಾಕಿ ಕುಳಿತಿದ್ದ. ಆತನ ಕಣ್ಣಿನಿಂದ ನೀರು ಸುರಿಯುತ್ತಿತ್ತು. ಅಳ್ತಾ ಇದ್ದೀಯಾ ಎಂದು ನ್ಯಾಯಾಧೀಶರು ಕೇಳಿದಾಗ ಕಸಬ್ ಉತ್ತರಿಸದೆ, ಮುಖ ಒರೆಸಿಕೊಂಡ. ಆತನ ಈ ಪ್ರತಿಕ್ರಿಯೆಯನ್ನು ನಿಕಂ ಅವರು ಇದು 'ಮೊಸಳೆ ಕಣ್ಣೀರು' ಎಂದು ಬಣ್ಣಿಸಿದರು." ಕಸಬ್ ಒಬ್ಬ ತರಬೇತುಗೊಂಡಿರುವ ಕಮಾಂಡೋ. ಪಶ್ಚಾತಾಪದ ಪ್ರಶ್ನೆ ಇಲ್ಲ. ಆತ ಮಾನಸಿಕ ಆಟ ಆಡುತ್ತಿದ್ದಾನೆ. ಆತ ನಗುತ್ತಾನೆ, ಅಮಾಯಕನಂತೆ ಕಾಣುತ್ತಾನೆ, ಕಣ್ಣೀರು ಕಟ್ಟಿದಂತೆ ನಟಿಸುತ್ತಾನೆ. ಇದೆಲ್ಲ ಮಾಧ್ಯಮಗಳ ಅನುಕಂಪ ಗಿಟ್ಟಿಸಲು ಮಾಡುತ್ತಿರುವ ನಾಟಕ ಎಂದು ನಿಕಂ ದೂರಿದರು.ತನ್ನ ಕಕ್ಷಿದಾರ ಇತ್ತೀಚಿನ ದಿನಗಳಲ್ಲಿ ಹೆಚ್ಚು ಮಂಕಾಗುತ್ತಿದ್ದಾನೆ. ಮತ್ತು ಆತನ ಮುಖವು ನಿರಾಶಾದಾಯಕತೆಯನ್ನು ಸೂಚಿಸುತ್ತದೆ ಎಂದು ಕಸಬ್‌ನ ವಕೀಲ ಅಬ್ಬಾಸ್ ಖಾಜ್ಮಿ ನ್ಯಾಯಾಲಯಕ್ಕೆ ತಿಳಿಸಿದರು.ಪ್ರಕರಣದ ವಿಚಾರಣೆ ಆರಂಭವಾದಾಗ, ಕಸಬ್ ತಾನು ತಪ್ಪೆಸಗಿಲ್ಲ ಎಂದು ಹೇಳಿದ್ದ, ಅಲ್ಲದೆ ಪೊಲೀಸರ ಹಿಂಸೆ ತಾಳದೆ ತಾನು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದೆ ಎಂದು ಹೇಳಿದ್ದ.ಪ್ರಕರಣದ ವಿಚಾರಣೆ ಹೆಚ್ಚಾಗಿ ಮರಾಠಿ ಮತ್ತು ಇಂಗ್ಲೀಷಿನಲ್ಲಿ ನಡೆಯುವ ಕಾರಣ ಇವುಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಲಾಗದ ಕಸಬ್ ಬೋರ್ ಆದವನಂತೆ ಕೆಲವೊಮ್ಮೆ ಕಕ್ಕಾಬಿಕ್ಕಿಯಾದವನಂತೆ ಕಂಡುಬರುತ್ತಾನೆ. ಆದರೆ ಸಾಕ್ಷಿದಾರರು ಆ ಭಯಾನಕ ಘಟನೆಯ ರಾತ್ರಿಯನ್ನು ವಿವರಿಸುವಾಗ ಮಾತ್ರ ಅರ್ಥೈಸಿಕೊಳ್ಳಲು ಕಷ್ಟಪಡುವಂತೆ ತೋರುತ್ತಾನೆ. |