ಲೋಕಸಭಾ ಚುನಾವಣಾ ಸೋಲಿಗೆ ವರುಣ್ ಗಾಂಧಿ ಅವರ ಪ್ರಚೋದನಕಾರಿ ಭಾಷಣವೇ ಕಾರಣ ಎಂಬ ಕೆಲವು ಬಿಜೆಪಿ ನಾಯಕರ ಆರೋಪಗಳನ್ನು ತಳ್ಳಿ ಹಾಕಿರುವ ವಿಶ್ವಹಿಂದೂ ಪರಿಷತ್ ವರುಣ್ ಬೆಂಬಲಕ್ಕೆ ನಿಂತಿದೆ.
ಚುನಾವಣಾ ಸೋಲಿಗೆ ವರುಣ್ ಗಾಂಧಿಯ ಮೇಲೆ ಗೂಬೆ ಕೂರಿಸಲಾಗುತ್ತಿರುವುದು ದುರದೃಷ್ಟಕರ ಎಂಬುದಾಗಿ ವಿಶ್ವಹಿಂದೂ ಪರಿಷತ್ ನಾಯಕ ಪ್ರವೀಣ್ ತೊಗಾಡಿಯಾ ಹೇಳಿದ್ದಾರೆ. ಗಯಾದಲ್ಲಿ ಧಾರ್ಮಿಕ ಸಮಾವೇಶ ಒಂದರಲ್ಲಿ ಪಾಲ್ಗೊಂಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
"ತಮಿಳ್ನಾಡು, ಆಂಧ್ರಪ್ರದೇಶ, ಕೇರಳ ಹಾಗೂ ರಾಜಸ್ಥಾನಗಳಲ್ಲಿ ಬಿಜೆಪಿಗೆ ಏನಾಯಿತು? ಅಲ್ಲಿಯಾಕೆ ಅದು ಹೀನಾಯವಾಗಿ ಸೋತಿದೆ" ಎಂದು ಅವರು ಪ್ರಶ್ನಿಸಿದರು.
ಈ ರಾಜ್ಯಗಳಲ್ಲಿ ಚುನಾವಣಾ ಸೋಲಿಗೆ ವರುಣ್ ಕಾರಣವಲ್ಲ. 2004ರಲ್ಲಿ ಬಿಜೆಪಿ ಸೋತಿದ್ದಾಗ ವರುಣ್ ಕಾರಣವಾಗಿರಲಿಲ್ಲ ಎಂದು ನುಡಿದರು.
ಬಿಜೆಪಿ ನಾಯಕರಾದ ಮುಕ್ತಾರ್ ಅಬ್ಬಾಸ್ ನಕ್ವಿ ಹಾಗೂ ಶಾನವಾಜ್ ಹುಸೇನ್ ಅವರುಗಳು ವರುಣ್ ಅವರ ಹಗೆ ಭಾಷಣವೇ ಬಿಜೆಪಿಗೆ ಸೋಲಿಗೆ ಕಾರಣ ಎಂದು ವಾದಿಸಿದ್ದರು. |