ಕನಿಷ್ಠ ಸೌಕರ್ಯಗಳೂ ಇಲ್ಲದ ಕಾನೂನು ಕಾಲೇಜುಗಳಿಗೆ ಪರವಾನಗಿ ನೀಡಿರುವ ಸರ್ಕಾರದ ಕ್ರಮವನ್ನು ತೀವ್ರ ತರಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್, ನೀವು ವಿದ್ಯಾರ್ಥಿಗಳ ಜೀವದೊಂದಿಗೆ ಆಟವಾಡುತ್ತಿದ್ದೀರಿ ಎಂದು ಖಾರವಾಗಿ ಹೇಳಿದೆ.
"ಗ್ರಂಥಾಲಯಗಳು, ಅಧ್ಯಾಪಕವರ್ಗವೂ ಇಲ್ಲದೆ ಬೇಸ್‌ಮೆಂಟ್‌ಗಳಲ್ಲಿ ಮತ್ತು ರೂಫ್‌ಟಾಪ್‌ಗಳಲ್ಲಿ ನಡೆಸುತ್ತಿರುವಂತಹ ಕಾನೂನು ಕಾಲೇಜುಗಳಿಗೂ ನೀವು ಪರವಾನಗಿ ನೀಡುತ್ತಿರುವುದು ವಿಚಿತ್ರವಾಗಿದೆ. ನೀವು ವಿದ್ಯಾರ್ಥಿಗಳ ಜೀವದೊಂದಿಗೆ ಆಟವಾಡುತ್ತಿದ್ದೀರಿ" ಎಂಬುದಾಗಿ ರಜಾಕಾಲದ ಪೀಠದ ನ್ಯಾಯಾಧೀಶರುಗಳಾದ ದಲ್ವೀರ್ ಭಂಡಾರಿ ಮತ್ತು ಅಶೋಕ್ ಕುಮಾರ್ ಗಂಗೂಲಿ ಸರ್ಕಾರಕ್ಕೆ ತಪರಾಕಿ ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಸಹಾಯ ಮಾಡಲು ನ್ಯಾಯಪೀಠವು ಅಟಾರ್ನಿ ಜನರಲ್ ಅವರನ್ನು ಕೇಳಿಕೊಂಡಿದೆ. ಪ್ರಕರಣವನ್ನು ಮತ್ತಷ್ಟು ವಿಚಾಣೆಗಾಗಿ ಮುಂದೂಡಲಾಗಿದೆ.
ಬಾನ್ನಿ ಫೋಯಿ ಕಾನೂನು ಕಾಲೇಜಿಗೆ ಅನುಮತಿ ನೀಡಿರುವ ಕುರಿತು ಮಧ್ಯಪ್ರದೇಶ ಹೈ ಕೋರ್ಟ್ ಪಾಸು ಮಾಡಿರುವ ನಿರ್ದೇಶನವನ್ನು ಪ್ರಶ್ನಿಸಿ ಭಾರತೀಯ ವಕೀಲರ ಸಂಘಟನೆ(ಬಿಸಿಐ)ಯು ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಮೇಲಿನ ಹೇಳಿಕೆ ನೀಡಿದೆ.
ಕೆಲವು ಷರತ್ತುಗಳನ್ನು ಪೂರೈಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಕಾಲೇಜಿಗೆ ಮನ್ನಣೆ ನೀಡಲು ವಕೀಲರ ಮಂಡಳಿಯು ನಿರಾಕರಿಸಿದ್ದರೂ, ಹೈಕೋರ್ಟ್ ತಾನು ನೇಮಿಸಿದ ದ್ವಿಸದಸ್ಯ ವಕೀಲರ ಸಮಿತಿಯು ನೀಡಿರುವ ವರದಿಯ ಆಧಾರದಲ್ಲಿ ಕಾಲೇಜಿಗೆ ಮನ್ನಣೆ ನೀಡುವಂತೆ ನಿರ್ದೇಶನ ನೀಡಿದೆ.
ಈ ನಿರ್ದೇಶನವನ್ನು ಬಿಸಿಐ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿದೆ. ಕಳೆದ ವರ್ಷ ಸರ್ವೋಚ್ಛ ನ್ಯಾಯಾಲಯವು ಹೈ ಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು. |