ನೈರುತ್ಯ ದೆಹಲಿಯ ಪೊಲೀಸ್ ಠಾಣೆಯೊಂದರಲ್ಲಿ ಸ್ಟೇಶನ್ ಹೌಸ್ ಮಾಸ್ಟರ್ ಮತ್ತು ಇತರ ನಾಲ್ವರು ತನ್ನ ಮೇಲೆ ಅತ್ಯಾಚಾರ ಎಸಗಿದರು ಎಂಬುದಾಗಿ ಮಹಿಳೆಯೊಬ್ಬಳು ದೂರಿರುವುದರಿಂದ ರೊಚ್ಚಿಗೆದ್ದಿರುವ ಜನತೆ ಪ್ರತಿಭಟನೆಗೆ ಇಳಿದು ಕಲ್ಲುತೂರಾಟ ನಡೆಸಿದ್ದಾರೆ.
ಇಂದೇರ್‌ಪುರಿಯ ಕೊಳಗೇರಿಯೊಂದರ ನಿವಾಸಿಯಾಗಿರುವ ಈ ಮಹಿಳೆಯನ್ನು ತನಿಖೆಗಾಗಿ ಪೊಲೀಸ್ ಠಾಣೆಗೆ ಸೋಮವಾರ ರಾತ್ರಿ ಕರೆದೊಯ್ದಿರುವ ಪೊಲೀಸರು ಈ ದುಷ್ಕೃತ್ಯ ಎಸಗಿದ್ದಾರೆ ಎಂದು ದೂರಲಾಗಿದೆ. ಈಕೆಯ ಪತಿ ಬೆಟ್ಟಿಂಗ್ ವ್ಯವಹಾರದಲ್ಲಿ ತೊಡಿಗಿದ್ದಾನೆ ಎಂದು ಹೇಳಲಾಗಿದೆ.
ಈ ಸಂದರ್ಭದಲ್ಲಿ ತನ್ನಮೇಲೆ ಲೈಂಗಿಕ ಅತ್ಯಾಚಾರ ಎಸಗಲಾಯಿತು ಎಂದು ದೂರಿರುವ ಮಹಿಳೆಯು, ಒಂದೊಮ್ಮೆ ಈ ವಿಚಾರವನ್ನು ಯಾರಬಳಿಯಾದರೂ ಬಾಯಿಬಿಟ್ಟಲ್ಲಿ ಅದರ ಪರಿಣಾಮವನ್ನು ಎದುರಿಸಬೇಕಾದೀತು ಎಂಬುದಾಗಿ ಅತ್ಯಾಚಾರ ಎಸಗಿರುವ ಪೊಲೀಸರು ಬೆದರಿಕೆ ಹಾಕಿರುವುದಾಗಿ ಆಕೆ ತಿಳಿಸಿದ್ದಾರೆ.
"ಮನೆಗೆ ತೆರಳಿದ ಬಳಿಕ ತಾನು ಈ ಘಟನೆಯನ್ನು ತನ್ನ ಪತಿಗೆ ತಿಳಿಸಿದ್ದು ಆತ ತನ್ನನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಈ ವಿಚಾರವನ್ನು ಪೊಲೀಸರಿಗೆ ತಿಳಿಸುವಂತೆ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದರು" ಎಂಬುದಾಗಿ ಆಕೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹೇಳಿದ್ದಾಳೆ.
'ಮಹಿಳೆಯರ ವಿರುದ್ಧ ಅಪರಾಧ ದಳ'ವು ಪ್ರಕರಣದ ತನಿಖೆ ನಡೆಸುತ್ತಿದೆ, ವೈದ್ಯಕೀಯ ಪರೀಕ್ಷೆಯ ವರದಿಗಳು ಬಂದನಂತರವಷ್ಟೆ ಈ ಕುರಿತು ಪ್ರತಿಕ್ರಿಯಸಲು ಸಾಧ್ಯ ಎಂಬುದಾಗಿ ದೆಹಲಿ ಪೊಲೀಸ್ ವಕ್ತಾರ ರಾಜನ್ ಭಗತ್ ಹೇಳಿದ್ದಾರೆ.
ಮಹಿಳೆಯ ಮೇಲೆ ಪೊಲೀಸರು ದೌರ್ಜನ್ಯ ಎಸಗಿರುವ ಸುದ್ದಿ ಹರಡುತ್ತಿರುವಂತೆಯೇ, ಸುಮಾರು 100 ಮಂದಿ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ್ದು, ಕಲ್ಲು ತೂರಾಟ ನಡೆಸಿದ್ದಾರೆ. ಸ್ಥಳದಲ್ಲಿ ಸಾಕಷ್ಟು ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದ್ದಾರೆ.
|