ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಹೀನಾಯವಾಗಿ ಸೋತ ಬಳಿಕ ಹೆಚ್ಚಿದ ಭಿನ್ನಮತದ ಹಿನ್ನೆಲೆಯಲ್ಲಿ ಉತ್ತರಖಂಡ್ ಮುಖ್ಯಮಂತ್ರಿ ಬಿ.ಸಿ. ಖಂಡೂರಿ ರಾಜೀನಾಮೆ ನೀಡಿದ್ದಾರೆ. ಬಿಕ್ಕಟ್ಟು ಶಮನದ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರು ರಾಜೀನಾಮೆ ನೀಡಲು ಸೂಚಿಸಿದ್ದರು.
75ರ ಹರೆಯದ ಖಂಡೂರಿ ಅವರು ಪಕ್ಷದ ಮುಖ್ಯಸ್ಥ ರಾಜ್‌ನಾಥ್ ಸಿಂಗ್ ಅವರಿಗೆ ಸೋಮವಾರ ರಾತ್ರಿ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಪಕ್ಷದ ನಾಯಕ ಎಲ್.ಕೆ. ಆಡ್ವಾಣಿ ಅವರ ನಿವಾಸದಲ್ಲಿ ನಡೆದ ಹಿರಿಯ ನಾಯಕರ ಸಭೆಯಲ್ಲಿ ಖಂಡೂರಿ ಅವರನ್ನು ಬದಲಿಸಲು ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಖಂಡೂರಿ ರಾಜೀನಾಮೆ ನೀಡಿದ್ದಾರೆ.
ಬುಧವಾರ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ಸಭೆಯಲ್ಲಿ ಖಂಡೂರಿ ಅವರ ಉತ್ತರಾಧಿಕಾರಿಯನ್ನು ಆರಿಸಲಾಗುವುದು. ಖಂಡೂರಿ ಸಂಪುಟದಲ್ಲಿದ್ದ ಪ್ರಕಾಶ್ ಪಂತ್(ಪ್ರವಾಸೋದ್ಯಮ ಹಾಗೂ ಸಂಸದೀಯ ವ್ಯವಹಾರಗಳು) ಮತ್ತು ರಮೇಶ್ ಪೋಖ್ರಿಯಾಲ್(ಆರೋಗ್ಯ) ಅವರುಗಳು ಮುಖ್ಯಮಂತ್ರಿ ಸ್ಥಾನದ ಸ್ಫರ್ಧೆಯಲ್ಲಿದ್ದಾರೆ ಎಂದು ಹೇಳಲಾಗಿದೆ.
"ಚುನಾವಣೆಯಲ್ಲಿ ರಾಜ್ಯದ ಐದೂ ಕ್ಷೇತ್ರಗಳಲ್ಲಿ ಪಕ್ಷವು ಸೋಲನ್ನಪ್ಪಿರುವುದರ ಹಿನ್ನೆಲೆಯಲ್ಲಿ ನೈತಿಕ ಹೊಣೆಹೊತ್ತು ಖಂಡೂರಿ ರಾಜೀನಾಮೆ ನೀಡಿದ್ದು, ಅವರ ರಾಜೀನಾಮೆಯನ್ನು ಸ್ವೀಕರಿಸಲಾಗಿದೆ" ಎಂದು ರಾಜ್‌ನಾಥ್ ಸಿಂಗ್ ಹೇಳಿದ್ದಾರೆ. |