ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿಯ ಉನ್ನತ ಸ್ಥಾನಮಾನಗಳನ್ನು ಜಾತಿ ಮತ್ತು ಧರ್ಮದ ಆಧಾರದಲ್ಲಿ ಎಐಸಿಸಿ ಮಂಜೂರು ಮಾಡುತ್ತಿರುವುದು ರಾಜ್ಯ ಕಾಂಗ್ರೆಸ್ ಘಟಕದಲ್ಲಿ ವಿವಾದದ ಕಿಡಿ ಹೊತ್ತಿಸಿದೆ.
ಹೊಸದಾಗಿ ನೇಮಕವಾಗಿರುವ ಆರು ಕಾರ್ಯಕಾರಿ ಸಮಿತಿಯ ಸದಸ್ಯರ ಹೆಸರಿನ ಪಕ್ಕದಲ್ಲಿ 'ಸಮುದಾಯ' ಎಂಬ ಅಂಕಣವಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಅಂಕಣವು ಅಧಿಕಾರಿಗಳ ಕಾರ್ಯಕ್ಷೇತ್ರದೊಂದಿಗೆ ಧರ್ಮ ಮತ್ತು ಜಾತಿಯನ್ನು ನಿರ್ದಿಷ್ಟವಾಗಿ ಸೂಚಿಸುತ್ತದೆ.
ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿಗೆ ಹೊಸದಾಗಿ ನೇಮವಾಗಿರುವ ಕಾರ್ಯದರ್ಶಿಗಳಾದ ಪ್ರವೀಣ್ ಕುಂಕೋಲಿಯೇನ್ಕರ್ ಮತ್ತು ಗುರುದಾಸ್ ನಟೇಕರ್ ಅವರನ್ನು ಅನುಕ್ರಮವಾಗಿ 'ಹಿಂದೂ ಸಾರಸ್ವತ್' ಮತ್ತು 'ಹಿಂದೂ ಮರಾಠ' ಎಂದು ವರ್ಗೀಕರಿಸಲಾಗಿದೆ. ಹೊಸ ಉಪಾಧ್ಯಕ್ಷರುಗಳಾದ ಕಾಂತ ಗಾವ್ಡೆ ಮತ್ತು ವಿಠೋಬ ದೇಸಾಯ್ ಅವರನ್ನು ಅನುಕ್ರಮವಾಗಿ 'ಹಿಂದು ಪರಿಶಿಷ್ಟವರ್ಗ' ಮತ್ತು 'ಹಿಂದೂ ಅಲ್ಪಸಂಖ್ಯಾತ' ಎಂಬುದಾಗಿ ವರ್ಗೀಕರಿಸಲಾಗದೆ.
"ಗೌರವಾನ್ವಿತ ಕಾಂಗ್ರೆಸ್ ಅಧ್ಯಕ್ಷರು ಈ ಕೆಳಗಿನ ಹೆಚ್ಚುವರಿ ಕಾರ್ಯಕಾರಿ ಸಮಿತಿಯ ಪಟ್ಟಿಯನ್ನು ಅಂಗೀಕರಿಸಿದ್ದಾರೆ" ಎಂಬುದಾಗಿ ಜಿಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.
"ಪಕ್ಷದೊಳಗಿನ ಭಡ್ತಿಗಾಗಿ ಹೈಕಮಾಂಡ್ ಜಾತಿ ಮತ್ತು ಧರ್ಮವನ್ನು ಮಾನದಂಡವಾಗಿಸಿರುವುದು ಸರಿಯಲ್ಲ. ಹಾಗಾದರೆ ಜಾತಿರಾಜಕೀಯದಿಂದಲೇ ಯಶಸ್ಸು ಕಾಣುತ್ತಿರುವ ಕೋಮುವಾದಿ ಬಿಜೆಪಿ ಅಥವಾ ಇತರ ಪ್ರಾದೇಶಿಕ ಪಕ್ಷಗಳಿಗಿಂತ ನಾವು ಹೇಗೆ ಭಿನ್ನ ಎಂಬುದಾಗಿ ಸದಸ್ಯರೊಬ್ಬರು ಪ್ರಶ್ನಿಸುತ್ತಿದ್ದಾರೆ.
ಸಮಾಜದ ಎಲ್ಲಾ ವರ್ಗಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಇದು ಕಾಂಗ್ರೆಸ್ ನೀತಿಗೆ ಸಮ್ಮತ ಎಂಬುದಾಗಿ ಹೇಳಿರುವ ಜಿಪಿಸಿಸಿ ಅಧ್ಯಕ್ಷ ಸುಭಾಷ್ ಶಿರೋಡ್ಕರ್, ಜಾತಿ ಮತ್ತು ಧರ್ಮದ ಉಲ್ಲೇಖವು ಆಕಸ್ಮಿಕವಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಬಯಸುವವರ ಎಲ್ಲಾ ವಿವರಗಳನ್ನು ನಾವು ಹೈಕಮಾಂಡಿಗೆ ಕಳುಹಿಸುತ್ತೇವೆ. ಯಾರನ್ನು ಆರಿಸಬೇಕು ಎಂಬುದು ಅವರ ವಿವೇಚನೆಗೆ ಬಿಟ್ಟ ವಿಚಾರ ಎಂದು ಅಧ್ಯಕ್ಷರು ಹೇಳಿದ್ದಾರೆ ಅಲ್ಲದೆ ಜಾತಿ ಮತ್ತು ಧರ್ಮ ಅಂಕಣವು ಉದ್ದೇಶಪೂರ್ವಕವಾದುದು ಎಂದು ಸ್ಪಷ್ಟಪಡಿಸಿದ್ದಾರೆ. |