ಕಳೆದ ವರ್ಷ ನವೆಂಬರ್ 26ರಂದು ಮುಂಬೈ ಮೇಲೆ ನಡೆದ ಭಯೋತ್ಪಾದನಾ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯವೊಂದು, ಜಮಾತ್ ಉದ್ ದಾವಾ ಮುಖ್ಯಸ್ಥ ಹಫೀಜ್ ಸಯೀದ್ ಮತ್ತು ಲಷ್ಕರ್ ಇ ತೋಯ್ಬಾ ಮುಖ್ಯಸ್ಥ ಝಕಿ ಉರ್ ರಹಮಾನ್ ಸೇರಿದಂತೆ ತಲೆಮರೆಸಿಕೊಂಡಿರುವ 22 ಮಂದಿ ಪಾಕಿಸ್ತಾನೀಯರ ವಿರುದ್ಧ ಮಂಗಳವಾರ ಜಾಮೀನುರಹಿತ ಬಂಧನದ ವಾರಂಟ್ ಜಾರಿಗೊಳಿಸಿದೆ.
ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕಮ್ ಅವರ ಮನವಿಯನ್ನು ಸ್ವೀಕರಿಸಿದ ವಿಶೇಷ ನ್ಯಾಯಾಧೀಶ ಎಂ.ಎಲ್.ತಹಿಲ್ಯಾನಿ ಅವರು ಮಂಗಳವಾರ ಈ ಕುರಿತು ಆದೇಶ ಹೊರಡಿಸುತ್ತಾ, ಇಂಟರ್‌ಪೋಲ್ ನೆರವು ಪಡೆದು ವಾರಂಟ್ ಜಾರಿಗೊಳಿಸುವಂತೆ ಮುಂಬೈ ಪೊಲೀಸ್ ಆಯುಕ್ತ ಹಾಗೂ ಸಿಬಿಐ ನಿರ್ದೇಶಕರಿಗೆ ನಿರ್ದೇಶಿಸಿದರು.
ಈ ದಾಳಿಗೆ ಸಂಬಂಧಿಸಿದಂತೆ ಏಕೈಕ ಪಾಕಿಸ್ತಾನಿ ಉಗ್ರಗಾಮಿ ಅಜ್ಮಲ್ ಅಮೀರ್ ಅಲಿಯಾಸ್ ಕಸಬ್ ಸದ್ಯಕ್ಕೆ ಪೊಲೀಸರ ವಶದಲ್ಲಿದ್ದಾನೆ. 60 ಗಂಟೆಗಳ ಕಾಲ ನಡೆದ ಚಕಮಕಿಯಲ್ಲಿ ಆತನ ಒಂಬತ್ತು ಮಂದಿ ಸಹಚರರು ಗುಂಡಿಗೆ ಬಲಿಯಾಗಿದ್ದರು.
170ಕ್ಕೂ ಹೆಚ್ಚು ಮಂದಿಯನ್ನು ಬಲಿತೆಗೆದುಕೊಂಡ ಈ ಪ್ರಕರಣದಲ್ಲಿ ಪಾಕಿಸ್ತಾನದ ಲಷ್ಕರ್ ಇ ತೋಯಿಬಾ ಕೈವಾಡವಿರುವ ಕುರಿತು 11,500 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಲಾಗಿದ್ದು, 35 ಮಂದಿ ಆರೋಪಿಗಳೆಂದು ಹೆಸರಿಸಲಾಗಿತ್ತು. ಅದರಲ್ಲಿ ಲಷ್ಕರ್ ಕಮಾಂಡರ್‌ಗಳಾದ ಝರಾರ್ ಶಾ, ಝಕಿ ಉರ್ ರಹಮಾನ್ ಲಖ್ವಿ ಹೆಸರು ಕೂಡ ಇತ್ತು. 35ರಲ್ಲಿ 27 ಮಂದಿಯ ವಿಳಾಸಗಳು ಭಾರತ ಸರಕಾರದ ಬಳಿ ಇರುವುದರಿಂದ ಅವರ ವಿರುದ್ಧ ಜಾಮೀನುರಹಿತ ಬಂಧನ ವಾರಂಟ್ ಜಾರಿಗೊಳಿಸುವಂತೆ ನಿಕಮ್ ಅವರು ನ್ಯಾಯಾಧೀಶರನ್ನು ಸೋಮವಾರ ಆಗ್ರಹಿಸಿದ್ದರು. |