ಕಾಡುಗಳ್ಳ ವೀರಪ್ಪನ್ ಹತ್ಯೆಯಲ್ಲಿ ಬಿರುದಾಂಕಿತರಾದ ಪೊಲೀಸ್ ಅಧಿಕಾರಿ ಕೆ. ವಿಜಯಕುಮಾರ್ ಅವರು ದೆಹಲಿ ಪೊಲೀಸ್ ಆಯುಕ್ತರಾದ ವೈ.ಎಸ್. ದಡವಾಲ್ ಅವರ ಉತ್ತರಾಧಿಕಾರಿ ಪಟ್ಟದ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ದಡವಾಲ್ ಅವರು ತಮ್ಮ ಎರಡು ವರ್ಷಗಳ ಅಧಿಕಾರಾವಧಿಯನ್ನು ಜು.25ರಂದು ಮುಗಿಸಲಿದ್ದಾರೆ.
ಪ್ರತಿಷ್ಠಿತ ಹುದ್ದೆಗೆ ನೇಮಕವನ್ನು ಮುಂದಿನ ತಿಂಗಳು ಕೈಗೊಂಡರೂ, ತಮಿಳುನಾಡು ಕೇಡರ್‌ನ 1975ರ ಬ್ಯಾಚ್ ಐಪಿಎಸ್ ಅಧಿಕಾರಿ ವಿಜಯಕುಮಾರ್ ಆಯುಕ್ತರ ಹುದ್ದೆಗೆ ಮುಂಚೂಣಿಯಲ್ಲಿದ್ದು, ನಗರದ ಹಿರಿಯ ಪೊಲೀಸ್ ಅಧಿಕಾರಿಗಳಾದ ಬಂಧೀಖಾನೆ ಪ್ರಧಾನ ನಿರ್ದೇಶಕ ಬಿ.ಕೆ. ಗುಪ್ತಾ ಮತ್ತು ವಿಶೇಷ ಆಯುಕ್ತ ನೀರಜ್‌ಕುಮಾರ್ ಅವರ ಹೆಸರುಗಳು ಕೂಡ ಕೇಳಿಬರುತ್ತಿವೆ.
ವಿಜಯಕುಮಾರ್ ಪ್ರಸಕ್ತ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಆಯುಕ್ತರ ಹುದ್ದೆಗೆ ಅವರು ಆಯ್ಕೆಯಾದರೆ, ಗಂಧದ ಮರದ ಕಳ್ಳಸಾಗಣೆದಾರ ವೀರಪ್ಪನ್‌ನನ್ನು ನಿವಾರಿಸುವ ಮೂಲಕ ಸುದ್ದಿಪತ್ರಿಕೆಯ ಮುಖಪುಟಗಳಲ್ಲಿ ರಾರಾಜಿಸಿದ ತಮಿಳುನಾಡು ಕೇಡರ್ ಪೊಲೀಸ್ ಅಧಿಕಾರಿಯು ದೆಹಲಿ ಪೊಲೀಸ್ ಆಯುಕ್ತರ ಹುದ್ದೆಯನ್ನು ವಹಿಸಿಕೊಂಡ ರಾಜ್ಯದ ಹೊರಗಿನ ವ್ಯಕ್ತಿಗಳಲ್ಲಿ ಎರಡನೆಯವರೆನಿಸಲಿದ್ದಾರೆ. |