ಸಾಮಾಜಿಕ ಸಂಘಟನೆ ಮತ್ತು ಪೋಷಕರ ಒತ್ತಡಕ್ಕೆ ಕೊನೆಗೂ ಮಣಿದಿರುವ ಉತ್ತರ ಪ್ರದೇಶ ಸರ್ಕಾರ, ಯಾವುದೇ ಕಾರಣಕ್ಕೂ ರಾಜ್ಯದಲ್ಲಿನ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಜೀನ್ಸ್ ಧರಿಸಬಾರದು ಎಂಬ ನಿಷೇಧವನ್ನು ಹೇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲದೇ ಅಂತಹ ಆದೇಶ ಹೊರಡಿಸಿದ್ದರೆ ಅದನ್ನು ಹಿಂಪಡೆಯಲು ಸೂಚಿಸುವುದಾಗಿ ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.
'ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಜೀನ್ಸ್ ತೊಡಬಾರದು ಎಂದು ರಾಜ್ಯ ಸರ್ಕಾರ ನಿಷೇಧ ಹೇರುವುದಿಲ್ಲ. ಅಲ್ಲದೇ ಈ ನಿಟ್ಟಿನಲ್ಲಿ ಉಡುಪು ಸಂಹಿತೆ ಬಗ್ಗೆಯೂ ಸರ್ಕಾರ ಯಾವುದೇ ಆದೇಶ ಹೊರಡಿಸುವುದಿಲ್ಲ' ಎಂದು ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಕಮ್ರಾನ್ ರಿಜ್ವಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಜೀನ್ಸ್ ನಿಷೇಧ ಮತ್ತು ಉಡುಪು ಸಂಹಿತೆ ಕುರಿತಂತೆ ಸಮಾಜ ಸೇವಾ ಸಂಘಟನೆಗಳು, ಪೋಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಉಡುಪು ಸಂಹಿತೆ ಜಾರಿಗೊಳಿಸಲು ಮುಂದಾದಲ್ಲಿ ಅಂತಹ ಸಂಸ್ಥೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮತ್ತು ಕಾಲೇಜುಗಳಿಗೆ ಆದೇಶವನ್ನು ಜಾರಿ ನೀಡಲಾಗುವುದು ಎಂದು ರಿಜ್ವಿ ಈ ಸಂದರ್ಭದಲ್ಲಿ ವಿವರಿಸಿದರು.
ಉತ್ತರ ಪ್ರದೇಶದ ಹಲವು ಕಾಲೇಜುಗಳ ಪ್ರಾಂಶುಪಾಲರು ವಿದ್ಯಾರ್ಥಿಗಳು ಕ್ಯಾಂಪಸ್ಸಿನಲ್ಲಿ ಜೀನ್ಸ್ ತೊಡುವುದರ ಮೇಲೆ ನಿಷೇಧ ಹೇರುವ ಮತ್ತು ಉಡುಪು ಸಂಹಿತೆಯನ್ನು ಜಾರಿಗೆ ತರಲು ಯೋಜಿಸುತ್ತಿದ್ದಾರೆ ಎಂಬುದಾಗಿ ಅಧಿಕಾರಿಗಳು ಸೋಮವಾರ ಹೇಳಿದ್ದರು.
"ಈ ಪ್ರಸ್ತಾಪವನ್ನು ಇತ್ತೀಚೆಗೆ ಉತ್ತರ ಪ್ರದೇಶದ ಪ್ರಾಂಶುಪಾಲರ ಸಂಘಟನೆಯು(ಯುಪಿಪಿಎ) ರೂಪಿಸಿದೆ. ಈ ಸಂಘಟನೆಯಲ್ಲಿ ರಾಜ್ಯದ ಸುಮಾರು 400 ಪದವಿ ಕಾಲೇಜುಗಳ ಸದಸ್ಯತ್ವವಿತ್ತು. ವಿದ್ಯಾರ್ಥಿಗಳು, ಹೆತ್ತವರು ಮತ್ತು ಪೋಷಕರೊಂದಿಗೆ ಚರ್ಚಿಸಿದ ಬಳಿಕವೇ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂಬುದಾಗಿ ಯುಪಿಪಿಎ ಸಂಚಾಲಕ ಅಶೋಕ್ ಶ್ರೀವಾಸ್ತವ್ ವಿವರಿಸಿದ್ದರು. |