ಬರಬೇಕಾಗಿದ್ದ ಮುಂಗಾರು ವಿಳಂಬವಾಗಿರುವುದು ಕೃಷಿಇಳುವರಿ ಮೇಲೆ ಆತಂಕದ ಛಾಯೆ ಕವಿದಿದೆ. ದಿನನಿತ್ಯದ ಆಧಾರದ ಮೇಲೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುವಂತೆ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸಕಾಲದಲ್ಲಿ ಮಳೆಯಿಲ್ಲದೇ ರೈತರು ಕಂಗಾಲಾಗಿದ್ದು, ಬೆಳೆಗಳು ಒಣಗುತ್ತಿವೆ.
ಮುಂಗಾರು ಮಳೆಯ ವಿಳಂಬದಿಂದಾಗಿ ಉದ್ಭವಿಸಿದ ಪರಿಸ್ಥಿತಿ ಕುರಿತ ಚರ್ಚೆಗೆ ಮಳೆ ಬೀಳದ ರಾಜ್ಯಗಳ ಕೃಷಿ ಕಾರ್ಯದರ್ಶಿಗಳ ಸಭೆಯನ್ನು ಶುಕ್ರವಾರ ಕರೆಯಲಾಗಿತ್ತು. ಮಳೆರಾಯನ ವಿಳಂಬದಿಂದಾಗಿ ಕೃಷಿ ಕ್ಷೇತ್ರದ ಮೇಲೆ ಪರಿಣಾಮ ಬೀರುವುದಿಲ್ಲೆಂದು ಹವಾಮಾನ ತಜ್ಞರು ಹೇಳಿದ್ದು, ಜುಲೈನಲ್ಲಿ ಬೀಳುವ ಮಳೆಯಿಂದ ಈ ತಿಂಗಳ ಕೊರತೆಯನ್ನು ತುಂಬುತ್ತದೆಂದು ಹೇಳಿದ್ದಾರೆ.1926ರಲ್ಲಿ ಕೂಡ ಇದೇ ರೀತಿಯ ಪರಿಸ್ಥಿತಿ ಉದ್ಭವಿಸಿತ್ತು.
ಆ ವರ್ಷ ಮುಂಗಾರು ಮಳೆ ಸಕಾಲದಲ್ಲಿ ಸುರಿಯಲು ವಿಫಲವಾಗಿ ಬಳಿಕ ಅಧಿಕ ಮಳೆ ದಾಖಲಾಗಿತ್ತು. ಸಾಮಾನ್ಯ ಪರಿಸ್ಥಿತಿಯಲ್ಲಿ ಮುಂಗಾರು ಮೋಡಗಳು ಜೂನ್ 10ರೊಳಗೆ ಮುಂಬೈಯನ್ನು ಮುಟ್ಟಿ, ಇಡೀ ಗುಜರಾತ್, ಮಧ್ಯಪ್ರದೇಶ ಮತ್ತು ಉತ್ತರಪ್ರದೇಶದ ಇತರೆ ಭಾಗಗಳನ್ನು ಜೂ.15ರೊಳಗೆ ತಲುಪಬೇಕಿತ್ತು. ನೈರುತ್ಯ ಮುಂಗಾರು ಮೇ 23ರಂದು ಬೇಗನೇ ಕಾಣಿಸಿಕೊಂಡು ರೈತಸಮುದಾಯದಲ್ಲಿ ಹರ್ಷದ ಹೊನಲು ಮೂಡಿಸಿತ್ತು. ಆದರೆ ಜೂ.7ರಿಂದ ಮಹಾರಾಷ್ಟ್ರದ ಕೊಂಕಣ ಪ್ರದೇಶದ ಮಾರ್ಗದಲ್ಲಿ ಮುಂಗಾರು ಸ್ಧಗಿತಗೊಂಡಿದೆಯೆಂದು ಹೇಳಲಾಗಿದೆ.
ತೀವ್ರ ಬಿಸಿಗಾಳಿ
ಉತ್ತರಭಾರತದಲ್ಲಿ ತೀವ್ರ ಬಿಸಿಗಾಳಿ ಮುಂದುವರಿದಿದ್ದು, ಉಷ್ಣಾಂಶ ಸಹಜ ಮಟ್ಟಕ್ಕಿಂತ ಹೆಚ್ಚಿದೆ. ರಾಜಸ್ತಾನದ ಗಂಗಾನಗರದಲ್ಲಿ ಉಷ್ಣಾಂಶ 45.6 ಡಿಗ್ರಿ ಸೆಲಿಸಿಯಸ್‌ಗೆ ಮುಟ್ಟಿದೆ.ಪಂಜಾಬ್ ಮತ್ತು ಹರ್ಯಾಣದಲ್ಲಿ ಬಿಸಿಗಾಳಿ ಮುಂದುವರಿದಿದ್ದು, ಸಾಮಾನ್ಯ ಉಷ್ಣಾಂಶ ಸಹಜ ಮಟ್ಟಕ್ಕಿಂತ 3-5 ಡಿಗ್ರಿ ಹೆಚ್ಚಿಗೆ ಉಳಿದಿದೆ. ಹಿಸ್ಸಾರ್‌ನಲ್ಲಿ 45.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಮುಖ್ಯಮಂತ್ರಿ ಕಳವಳ
ಬೆಂಗಳೂರು ವರದಿ: ಕರ್ನಾಟಕದಲ್ಲಿ ಕೂಡ ಮುಂಗಾರು ವಿಳಂಬದಿಂದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಕಳವಳ ವ್ಯಕ್ತಪಡಿಸಿದ್ದಾರೆ. 77 ಲಕ್ಷ ಹೆಕ್ಟೇರ್ ಕೃಷಿಭೂಮಿಯಲ್ಲಿ ಶೇ.20ರಷ್ಟು ಮಾತ್ರ ಬೀಜ ಬಿತ್ತಲಾಗಿದೆ. ವಿವಿಧ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿರುವುದಕ್ಕೆ ಮತ್ತು ನೈರುತ್ಯ ಮುಂಗಾರು ನಿಷ್ಕ್ರಿಯತೆಯಿಂದ ಮುಖ್ಯಮಂತ್ರಿ ಕಳವಳಪಟ್ಟಿದ್ದಾರೆ. ಸುದ್ದಿಗಾರರ ಜತೆ ಮಾತನಾಡುತ್ತಿದ್ದ ಅವರು ಮಳೆ ದೇವರು ರಾಜ್ಯದ ರೈತರ ಮುಖದಲ್ಲಿ ಸಂತಸದ ಕಳೆ ಮೂಡಿಸುತ್ತದೆಂದು ಆಶಯ ವ್ಯಕ್ತಪಡಿಸಿದ್ದಾರೆ. |