ಆರೋಗ್ಯ ಸಚಿವ, ಮಾಜಿ ಪತ್ರಕರ್ತ ರಮೇಶ್ ಪೋಖ್ರಿಯಾಲ್ ಅವರು ಉತ್ತರಾಖಂಡದ ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಲಿದ್ದು, ಅವರನ್ನು ಬಿಜೆಪಿ ಶಾಸಕಾಂಗ ಪಕ್ಷವು ಬುಧವಾರ ಸದನ ನಾಯಕನಾಗಿ ಆಯ್ಕೆ ಮಾಡಿದೆ.
ಇದರೊಂದಿಗೆ, ಇತ್ತೀಚಿನ ಮಹಾ ಚುನಾವಣೆಗಳಲ್ಲಿ ಸೋಲಿನಿಂದಾಗಿ ಕಂಗೆಟ್ಟಿದ್ದ ಬಿಜೆಪಿಯೊಳಗಿನ ಪರಿಸ್ಥಿತಿ ತಕ್ಕಮಟ್ಟಿಗೆ ತಹಬದಿಗೆ ಬರುವ ಸೂಚನೆ ಗೋಚರವಾಗತೊಡಗಿದೆ. ಸೋಲಿಗೆ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಬಿ.ಸಿ.ಖಂಡೂರಿ ರಾಜೀನಾಮೆ ನೀಡಿದ್ದರಿಂದ ಆ ಸ್ಥಾನ ಖಾಲಿಯಾಗಿತ್ತು. ಬುಧವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಆರೋಗ್ಯ ಸಚಿವ ಪೋಖ್ರಿಯಾಲ್ ಅವರನ್ನು ನಾಯಕರನ್ನಾಗಿ ಒಮ್ಮತದಿಂದ ಆಯ್ಕೆ ಮಾಡಲಾಗಿತ್ತು.
ಸಭೆಯಲ್ಲಿ ಸಿಎಂ ಖಂಡೂರಿ ಅವರೇ ಪೋಖ್ರಿಯಾಲ್ ಅವರ ಹೆಸರನ್ನು ಪ್ರಸ್ತಾಪಿಸಿದ್ದರು. ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ಹಿರಿಯ ನಾಯಕರಾದ ಪ್ರಕಾಶ್ ಪಂತ್, ತಿವೇಂದ್ರ ರಾವತ್ ಮತ್ತು ಚಂದನ್ ರಾಮದಾಸ್ ಅವರೆಲ್ಲರೂ ಒಮ್ಮತದಿಂದ ಬೆಂಬಲ ವ್ಯಕ್ತಪಡಿಸಿದರು.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಈ ರಾಜ್ಯದ ಒಂದೇ ಒಂದು ಸ್ಥಾನ ಗೆಲ್ಲಲು ವಿಫಲವಾದುದು ಅನೇಕ ಭಿನ್ನಮತೀಯರಿಗೆ ಆಹಾರವಾಯಿತು. ಸೋಲಿನ ಹೊಣೆ ಹೊತ್ತು ಬಿ.ಸಿ.ಖಂಡೂರಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಖಂಡೂರಿ ಅವರು ಉತ್ತರಾಖಂಡ ರಾಜ್ಯಪಾಲ ಬಿ.ಎಲ್.ಜೋಷಿ ಅವರಿಗೆ ಗುರುವಾರ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಹಂತ ಹಂತವಾಗಿ ಮೇಲೇರಿದ ಪೋಖ್ರಿಯಲ್: 90ರ ದಶಕದ ಆದಿಭಾಗದಲ್ಲಿ ರಾಮ ಮಂದಿರ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ 51ರ ಹರೆಯದ ಮಾಜಿ ಪತ್ರಕರ್ತ ಪೋಖ್ರಿಯಲ್, ರಾಜ್ಯ ರಾಜಕೀಯದಲ್ಲಿ ಹಂತ ಹಂತವಾಗಿ ಮೇಲೇರಿದವರು. ಉತ್ತರ ಪ್ರದೇಶದಲ್ಲಿ ಬಿಜೆಪಿಯು ರಾಮ ಮಂದಿರ ಆಂದೋಲನದ ಬಳಿಕ ಅಧಿಕಾರಕ್ಕೇರಿದಾಗ, ರಾಜ್ಯ ವಿಭಜನೆಯಾಗುವ ಮೊದಲು ಉ.ಪ್ರ.ದಲ್ಲಿ ಪರ್ವತಾಭಿವೃದ್ಧಿ ಸಚಿವರಾಗಿದ್ದರು.
1991ರಲ್ಲಿ ಉತ್ತರ ಪ್ರದೇಶ ವಿಧಾನಸಭೆಗೆ ಕಾಲಿರಿಸಿದ್ದ ಅವರು, 1993 ಮತ್ತು 1996ರಲ್ಲಿ ಕರ್ಣಪ್ರಯಾಗ ಕ್ಷೇತ್ರದಿಂದ ಪುನರಾಯ್ಕೆಗೊಂಡಿದ್ದರು.
2000ರ ನವೆಂಬರ್ ತಿಂಗಳಲ್ಲಿ ಉತ್ತರಾಖಂಡವು ಉತ್ತರಪ್ರದೇಶದಿಂದ ಬೇರ್ಪಟ್ಟು ಪ್ರತ್ಯೇಕ ರಾಜ್ಯವಾದಾಗ, ಉತ್ತರಾಖಂಡದ ಪ್ರಥಮ ಮುಖ್ಯಮಂತ್ರಿ ನಿತ್ಯಾನಂದ ಸ್ವಾಮಿ ವಿರುದ್ಧ ಬಂಡಾಯವೆದ್ದಿದ್ದರು. ಪದಸ್ವೀಕಾರ ಸಮಾರಂಭಕ್ಕೆ ಹಾಜರಾಗದಿದ್ದಾಗ, ಹೈಕಮಾಂಡ್ ಅವರ ಮನವೊಲಿಸಿತ್ತು. ಬಳಿಕ ಅವರು ಮಧ್ಯಂತರ ಸರಕಾರದಲ್ಲಿ ಮೊದಲ ವಿತ್ತ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. |