ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ ಎಂದು ಬೊಬ್ಬಿರಿಯುತ್ತಿರುವ ಮಾನವ ಹಕ್ಕು ಆಯೋಗವೇ ಮಾನವ ಹಕ್ಕು ಉಲ್ಲಂಘಿಸಿದ ಕುತೂಲಕಾರಿ ಅಂಶ ಬಯಲಾಗಿದ್ದಲ್ಲದೆ, ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ದೆಹಲಿ ಉಚ್ಚ ನ್ಯಾಯಾಲಯ 1 ಲಕ್ಷ ರೂ. ದಂಡವಿಧಿಸಿದ ಪ್ರಕರಣ ನಡೆದಿದೆ.
ಆಯೋಗ ತಾನು ಮಾಡಿದ ಸ್ವಯಂಕೃತಾಪರಾಧಕ್ಕೆ ಒಂದು ಲಕ್ಷ ರೂಪಾಯಿ ದಂಡ ತೆರಬೇಕಾಗಿದೆ. ಈ ದಂಡ ವಿಧಿಸಿದ್ದು ದೆಹಲಿ ಹೈಕೋರ್ಟ್.
ಆಯೋಗದಲ್ಲಿ 10ವರ್ಷಗಳಿಂದ ಕೆಲಸಕ್ಕಿದ್ದ ರಾಜೇಂದರ್ ಪ್ರಸಾದ್ ಎಂಬ ಕಾನ್‌ಸ್ಟೇಬಲ್‌ವೊಬ್ಬರನ್ನು ಕೆಲಸದಿಂದ ಕಿತ್ತು ಹಾಕಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ. ಇಷ್ಟು ವರ್ಷವಾದರೂ ಇವರ ನೇಮಕಾತಿಯನ್ನು ಕಾಯಂಗೊಳಿಸಿರಲಿಲ್ಲವಾಗಿತ್ತು. ಇದ್ದಕ್ಕಿದ್ದಂತೆ ಅವರ ನೇಮಕಾತಿಯಲ್ಲಿ ನಿಯಮಗಲ ಉಲ್ಲಂಘನೆಯಾಗಿದೆ ಎಂಬ ನೆಪವೊಡ್ಡಿ ಅವರನ್ನು ಕೆಲಸದಿಂದಲೇ ವಜಾ ಮಾಡಲಾಗಿತ್ತು.
ಸೇವೆಯನ್ನು ಕಾಯಂಗೊಳಿಸುವಂತೆ ಪ್ರಸಾದ್ ಮಾಡಿಕೊಂಡ ಮನವಿಯನ್ನು ಕಿವಿಗೆ ಹಾಕಿಕೊಳ್ಳದ ಮಾನವ ಹಕ್ಕು ಆಯೋಗದ ಧೋರಣೆಯನ್ನು ಕೂಡ ದೆಹಲಿ ಹೈಕೋರ್ಟ್ ಟೀಕಿಸಿದೆ. ನೇಮಕಾತಿಯಲ್ಲಿ ನ್ಯೂನತೆ ಇದ್ದರೂ ದೀರ್ಘಾವಧಿಯವರೆಗೆ ಸೇವೆ ಮುಂದುವರಿಸಿಕೊಂಡು ಹೋಗುವುದರಿಂದ ಉದ್ಯೋಗಿಯ ಇಡೀ ವೃತ್ತಿ ಜೀವನವೇ ಹಾಳಾಗುತ್ತದೆ. ಹೆಚ್ಚು ವಯಸ್ಸು ಮತ್ತಿತರ ಕಾರಣಗಳಿಂದಾಗಿ ಹಲವಾರು ಅವಕಾಶಗಳು ಉದ್ಯೋಗಿಯ ಕೈತಪ್ಪಿಹೋಗಿರುವ ಸಾಧ್ಯತೆ ಇರುತ್ತದೆ. ಉದ್ಯೋಗಿಯನ್ನು ಇಷ್ಟು ತಡ ಮಾಡಿ ವಜಾ ಮಾಡುವ ಬದಲು ಆರಂಭದಲ್ಲೇ ಈ ಕಾರ್ಯ ಮಾಡಿದ್ದರೆ ಆತ ಬೇರೆಲ್ಲಾದರೂ ಕೆಲಸ ಪಡೆದು ಬದುಕಿಗೆ ಆಧಾರ ರೂಪಿಸಿಕೊಳ್ಳುತ್ತಿದ್ದರು ಎಂದು ನ್ಯಾ.ಕೈಲಾಶ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
ರಾಜೇಂದರ್ ಪ್ರಸಾದ್ ಅವರು ಆಯೋಗದಲ್ಲಿ ಕಾನ್‌ಸ್ಟೇಬಲ್ ಆಗುವ ಮುನ್ನ ಸೇನೆಯಲ್ಲಿ ಹವಾಲ್ದಾರ್ ಆಗಿ 15ವರ್ಷ ಸೇವೆ ಸಲ್ಲಿಸಿದ್ದರು. ಅಲ್ಲಿ ಸ್ವಯಂ ಇಚ್ಛೆಯಿಂದ ನಿವೃತ್ತಿಯಾಗಿದ್ದರು. ಆಯೋಗ 1996ರಲ್ಲಿ ರಾಜೇಂದರ್ ಪ್ರಸಾದ್ ಅವರನ್ನು ಒಂದು ವರ್ಷದ ಗುತ್ತಿಗೆ ಆಧಾರದ ಮೇಲೆ ಕಾನ್‌ಸ್ಟೇಬಲ್ ಹುದ್ದೆ ನೀಡಿತ್ತು. ಸೇವೆಯನ್ನು ಕಾಯ ಮಾಡುವ ಭರವಸೆಯನ್ನೂ ನೀಡಿತ್ತು. ಇದ್ಯಾವುದೇ ಮಾಡದೆ 10ವರ್ಷಗಳ ನಂತರ ಸರಿಯಾದ ಕಾರಣ ಕೊಡದೆ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ರಾಜೇಂದರ್ ಪರ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. |