ಪಾಕಿಸ್ತಾನದಲ್ಲಿನ ತಾಲಿಬಾನ್ ಉಗ್ರರು ಕೇವಲ ಭಾರತಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೆ ಅತ್ಯಂತ ಅಪಾಯಕಾರಿಗಳು ಎಂದು ಕೇಂದ್ರ ರಕ್ಷಣಾ ಸಚಿವ ಎ.ಕೆ.ಆಂಟನಿ ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ಗಡಿಭಾಗವಾಗಿರುವ ಜಮ್ಮು-ಕಾಶ್ಮೀರದಿಂದ ದೇಶದೊಳಕ್ಕೆ ಉಗ್ರರು ನುಸುಳುತ್ತಿದ್ದಾರೆ ಎಂಬ ಆರೋಪವನ್ನು ತಳ್ಳಿಹಾಕಿದರು. ' ತಾಲಿಬಾನಿಗಳು ಇಡೀ ವಿಶ್ವ ಸಮುದಾಯದ ಶಾಂತಿಗೆ ಅಪಾಯಕಾರಿಗಳಾಗಿದ್ದಾರೆ. ಅದರಂತೆ ಭಾರತಕ್ಕೆ ದೊಡ್ಡ ಕಂಟಕಪ್ರಾಯರಾಗಿದ್ದಾರೆ ಎಂದು ನಗರದಲ್ಲಿ ಎರಡು ದಿನಗಳ ಕಮಾಂಡರ್ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.' ಗಡಿಭಾಗದಿಂದ ದೇಶದೊಳಕ್ಕೆ ಅತಿಕ್ರಮವಾಗಿ ಉಗ್ರರು ಪ್ರವೇಶಿಸುತ್ತಿದ್ದಾರೆಂಬುದನ್ನು ನಿರಾಕರಿಸಿದ ಆಂಟನಿ, ಉಗ್ರರು ಬೇರೆಡೆಯಿಂದ ಕಾರ್ಯಾಚರಿಸುತ್ತಿದ್ದಾರೆ ಎಂದರು. ಆದರೆ ಭಾರತ ಗಡಿಭಾಗದಲ್ಲಿ ಭದ್ರತೆಯನ್ನು ಕಡಿತಗೊಳಿಸುವುದಿಲ್ಲ, ಅದರಲ್ಲೂ ಮುಖ್ಯವಾಗಿ ಜಮ್ಮು-ಕಾಶ್ಮೀರದಲ್ಲಿ ವಿಶೇಷ ನಿಗಾ ವಹಿಸಲಾಗಿದೆ. ಆ ಕುರಿತು ನಾವು ತುಂಬಾ ಜಾಗರೂಕರಾಗಿ ಕಾವಲು ಕಾಯುತ್ತಿರುವುದಾಗಿ ಹೇಳಿದರು.ತಾಲಿಬಾನ್ ಉಗ್ರರು ಸೇರಿದಂತೆ ಭಾರತದಲ್ಲಿ ಭಯೋತ್ಪಾದನಾ ಕೃತ್ಯ ಎಸಗಿ ಪಾಕಿಸ್ತಾನದ ನೆಲೆಸಿರುವ ಉಗ್ರರು ಹಾಗೂ ಅವರಿಗೆ ಬೆಂಬಲ ನೀಡಿದ ಸಂಘಟನೆಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಿ ಎಂದು ಪಾಕಿಸ್ತಾನಕ್ಕೆ ನಾವು ಹೇಳುತ್ತಲೇ ಬಂದಿದ್ದೇವೆ. ಆದರೆ, ಪಾಕಿಸ್ತಾನ ಭಾರತಕ್ಕೆ ಬೇಕಿರುವ ಉಗ್ರರ ವಿರುದ್ದ ಕ್ರಮಕೈಗೊಳ್ಳುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. |