ಅಲ್-ಜಾವಾದ್-ಎ-ಕರಮ್ ಎಂಬ ಸೌದಿಯ ವ್ಯಾಪಾರಿ ಹಡಗು ಕಣ್ಮರೆಯಾಗಿರುವ ಬಗ್ಗೆ ವರದಿಯಾಗಿದೆ. ಪಶ್ಚಿಮ ಗುಜರಾತಿನ ಬಳಿ ಅರಬ್ಬಿಸಮುದ್ರದ ಆಳಪ್ರದೇಶದಲ್ಲಿ ಓಕಾ ಪೋರ್ಟ್‌ಗೆ 12 ನಾಟಿಕಲ್ ಮೈಲು ದೂರದಲ್ಲಿ ತೀವ್ರ ಬಿರುಗಾಳಿಯಿಂದ ಹಡಗು ಮುಳುಗಿರುವುದಾಗಿ ಶಂಕಿಸಲಾಗಿದೆ. ಓಕಾ ತೀರದಲ್ಲಿ ಸೌದಿ ಧ್ವಜವಿದ್ದ ಎರಡು ಹಡಗುಗಳಾದ ಅಲ್-ಹುಸೇನಿ ಮತ್ತು ಅಲ್-ಜಾವಾಜ್-ಎ-ಕರಮ್ ಗುರುವಾರ ಬೆಳಿಗ್ಗೆ ಸಮುದ್ರದ ಉಬ್ಬರಕ್ಕೆ ಸಿಕ್ಕಿಬಿದ್ದವು.
ಎರಡು ಹಡಗುಗಳಲ್ಲಿ ಅಲ್-ಜವಾಜ್ ಕಣ್ಮರೆಯಾಗಿರುವ ವರದಿಯಾಗಿದ್ದು, ಹಡಗಿನ ಸಿಬ್ಬಂದಿ ಬೆಳಿಗ್ಗೆಯಿಂದ ಯಾವುದೇ ಸಂಪರ್ಕ ಹೊಂದಿಲ್ಲವೆಂದು ಅಧಿಕಾರಿ ತಿಳಿಸಿದ್ದಾರೆ. ಸುಮಾರು 13 ಜನ ಸಿಬ್ಬಂದಿಯಿದ್ದ ವಾಣಿಜ್ಯೋದ್ದೇಶದ ಹಡಗು ಮುಳುಗಿದೆಯೆಂದು ಈಗ ನಂಬಲಾಗಿದ್ದು, ಸಮುದ್ರ ಮಧ್ಯದಲ್ಲಿ ಕರಾವಳಿ ಪಡೆಯ ನೌಕೆಗಳು ಸಿಬ್ಬಂದಿಗಾಗಿ ಶೋಧಿಸುತ್ತಿವೆ.
ಬಿರುಗಾಳಿಯ ಸಂದರ್ಭದಲ್ಲಿ ಹಡಗಿನಿಂದ ಸಿಬ್ಬಂದಿ ಜೀವರಕ್ಷಕ ದೋಣಿಗಳಿಗೆ ಹಾರಿರಬಹುದೆಂಬ ಶಂಕೆಯ ಮೇಲೆ ಶೋಧ ನಡೆಸಲಾಗುತ್ತಿದೆ.ಅಲ್ ಹುಸೇನಿ ಸುಮಾರು ಗಂಟೆಗೆ 55 ಕಿಮೀ ಬೀಸುವ ಬಿರುಗಾಳಿಗೆ ಸಿಕ್ಕಿದರೂ ಸಿಬ್ಬಂದಿ ಸುರಕ್ಷಿತವಾಗಿದ್ದಾರೆಂದು ಹೇಳಲಾಗಿದೆ. ಎರಡು ಹಡಗುಗಳು ಶಾರ್ಜಾದಲ್ಲಿ ಭಾರತ ಜಲಪ್ರದೇಶದಲ್ಲಿ ಸಾಗುವಾಗ ಬಿರುಗಾಳಿಯ ಆರ್ಭಟಕ್ಕೆ ಸಿಕ್ಕಿಬಿತ್ತೆಂದು ವರದಿಯಾಗಿದೆ. |