ಅಸ್ಸಾಂನಲ್ಲಿ ಉಲ್ಫಾ ಉಗ್ರಗಾಮಿಗಳು ಕರೆ ನೀಡಿರುವ ಬಂದ್‌ನಿಂದಾಗಿ ಗುರುವಾರ ಇಲ್ಲಿನ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಇಬ್ಬರು ಉಗ್ರರು ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ.
ಇಲ್ಲಿಗೆ ಸಮೀಪದ ಕಾಮರೂಪ ಜಿಲ್ಲೆಯಲ್ಲಿ ಉಗ್ರಗಾಮಿಯೊಬ್ಬನನ್ನು ಭದ್ರತಾ ಸಿಬ್ಬಂದಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಹತ್ಯೆಗೊಳಗಾದ ವ್ಯಕ್ತಿಯ ಬಳಿಯಿದ್ದ ಪಿಸ್ತೂಲ್, ಕೈಬಾಂಬ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಕೊಕ್ರಾಜರ್ ಜಿಲ್ಲೆಯಲ್ಲೂ ಮತ್ತೊಬ್ಬ ಉಗ್ರನನ್ನು ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ.
ರಾಜ್ಯದಲ್ಲಿ ಅಂಗಡಿ, ಮುಂಗಟ್ಟುಗಳು ಮುಚ್ಚಿದ್ದು, ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಬಂದ್ ಮಾಡಿದ್ದವು. ಸಂಚಾರ ವ್ಯವಸ್ಥೆಯೂ ತೀರಾ ವಿರಳವಾಗಿತ್ತು. ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಕಳೆದ ಒಂದು ತಿಂಗಳ ಅವಧಿಯಲ್ಲಿ 30 ಉಗ್ರಗಾಮಿಗಳನ್ನು ಭದ್ರತಾ ಪಡೆಗಳು ಕೊಂದಿರುವುದನ್ನು ಪ್ರತಿಭಟಿಸಿ ಇಂದು 12ಗಂಟೆಗಳ ಬಂದ್‌ಗೆ ಉಲ್ಫಾ ಸಂಘಟನೆ ಕರೆ ಕೊಟ್ಟಿತ್ತು. |