ಕೇಂದ್ರ ಸರಕಾರವು 10ನೇ ತರಗತಿ ಪರೀಕ್ಷೆಯನ್ನು ಐಚ್ಛಿಕವಾಗಿಸಿ, ಶೈಕ್ಷಣಿಕ ಸುಧಾರಣೆಗೆ ಯೋಜನೆ ರೂಪಿಸಿರುವಂತೆಯೇ ಒಂದು ಹೆಜ್ಜೆ ಮುಂದೆ ಹೋಗಿರುವ ಉತ್ತರ ಪ್ರದೇಶದ ಮಾಯಾವತಿ ಸರಕಾರ, ಆರರಲ್ಲಿ ಒಂದು ವಿಷಯದಲ್ಲಿ ಅನುತ್ತೀರ್ಣರಾದವರು ಕೂಡ 11ನೇ ತರಗತಿಗೆ ಸೇರಬಹುದು ಎಂದು ಹೇಳಿದೆ.ಸದ್ಯದ ಪದ್ಧತಿ ಪ್ರಕಾರ ಒಂದು ವಿಷಯದಲ್ಲಿ ನಪಾಸಾದರೂ, ಅವರು ಇಡೀ ವರ್ಷ ಮನೆಯಲ್ಲೇ ಇರಬೇಕಾಗಿತ್ತು. 10ನೇ ತರಗತಿ ಅಂತಿಮ ಪರೀಕ್ಷೆಗಳಲ್ಲಿ ಆರರಲ್ಲಿ ಐದು ವಿಷಯಗಳಲ್ಲಿ ಉತ್ತೀರ್ಣರಾದವರು ಮುಂದಿನ ತರಗತಿಗೆ ಹೋಗಲು ಅನುವಾಗುವಂತೆ, ಮತ್ತು ಇದು ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರುವಂತೆ ಉತ್ತರ ಪ್ರದೇಶ ಸಚಿವ ಸಂಪುಟವು ನಿರ್ಣಯ ಕೈಗೊಂಡಿದೆ ಎಂದು ಮಾಯಾವತಿ ಸುದ್ದಿಗಾರರಿಗೆ ತಿಳಿಸಿದ್ದಾರೆ.ಅಂಕ ಪಟ್ಟಿಯಲ್ಲಿ ಶ್ರೇಯಾಂಕಗಳನ್ನು (ಗ್ರೇಡ್) ನಮೂದಿಸಲಾಗುತ್ತದೆ, ಈ ಪದ್ಧತಿಯು 2010-11 ಶೈಕ್ಷಣಿಕ ವರ್ಷದಿಂದ ಜಾರಿಗೆ ಬರುತ್ತದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. |