' ಕ್ರಿಶ್ಚಿಯನ್ನರೇ ಕ್ಷಮಿಸಿ...ಇಂತಹ ಘಟನೆ ನಡೆಯಬಾರದಿತ್ತು' ಹೀಗಂತ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಕೋಮು ದಳ್ಳುರಿಯಿಂದ ನೊಂದಿರುವ ಒರಿಸ್ಸಾದ ಕಂಧಮಾಲ್‌ನ ನಿರಾಶ್ರಿತರ ಶಿಬಿರವೊಂದಕ್ಕೆ ಶುಕ್ರವಾರ ಭೇಟಿ ನೀಡಿದ ಸಂದರ್ಭದಲ್ಲಿ ಚಿದು ಅವರಿಂದ ಹೊರಹೊಮ್ಮಿದ ನುಡಿಗಳಿವು. 85 ರ ಹರೆಯದ ವಿಶ್ವಹಿಂದೂ ಪರಿಷತ್ ಮುಖಂಡ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಅವರನ್ನು ಕಳೆದ ವರ್ಷ ದುಷ್ಕರ್ಮಿಗಳು ಹತ್ಯೆಗೈದ ನಂತರ, ಕಂಧಮಾಲ್ ತಿಂಗಳು ಕಾಲ ಕೋಮುದಳ್ಳುರಿಯಿಂದ ಹೊತ್ತಿ ಉರಿದಿತ್ತು. ಸಾವಿರಾರು ಮಂದಿ ಮನೆ-ಮಠ ಕಳೆದುಕೊಂಡಿದ್ದರು. ಘಟನೆಯಲ್ಲಿ ಬಲಿಪಶುವಾಗಿ ನಿರಾಶ್ರಿತರ ಶಿಬಿರಗಳಲ್ಲಿರುವ ಕ್ರಿಶ್ಚಿಯನ್ ಕುಟುಂಬಗಳನ್ನು ಚಿದಂಬರಂ ಅವರು ಈ ಸಂದರ್ಭದಲ್ಲಿ ಭೇಟಿ ಮಾಡಿದರು.ಕಳೆದ ವರ್ಷ ನಡೆದ ಘಟನೆ ಕುರಿತಾಗಿ ನೊಂದ ಕ್ರಿಶ್ಚಿಯನ್ ಕುಟುಂಬಗಳಲ್ಲಿ ಕ್ಷಮಾಪಣೆ ಕೋರಿದರು,ಇದರಿಂದಾಗಿ ತಾವೆಲ್ಲ ನಿರಾಶ್ರಿತರ ಶಿಬಿರಗಳಿಗೆ ಬರುವಂತಾಯಿತು ಎಂದರು. ಆದರೆ ನೀವೆಲ್ಲ ನಿಮ್ಮ ಊರುಗಳಿಗೆ ಹಿಂದಿರುಗಿ ಎಂದು ಮನವಿ ಮಾಡಿದರು. ಅಲ್ಲದೇ ನೀವೇನು ಭಯಪಡಬೇಕಾದ ಅಗತ್ಯವಿಲ್ಲ, ನಿಶ್ಚಿಂತೆಯಿಂದ ನಿಮ್ಮ ಮನೆಗೆ ಮರಳಿ ಎಂದು ಧೈರ್ಯ ತುಂಬಿದರು. ಕೋಮುದಳ್ಳುರಿ ಘಟನೆಯನ್ನು ತೀವ್ರವಾಗಿ ಖಂಡಿಸಿದ ಗೃಹ ಸಚಿವರು, ನೀವು ಮತ್ತೆ ಹೊಸ ಜೀವನವನ್ನು ಆರಂಭಿಸಿ ಎಂದು ಕೇಳಿಕೊಂಡು, ನಿಮ್ಮ ಚರ್ಚ್‌ಗಳನ್ನು ಪುನರ್ ನಿರ್ಮಿಸಿ, ಧಾರ್ಮಿಕ ಆಚರಣೆಯನ್ನು ಮುಂದುವರಿಸಿ ಎಂದು ಸಲಹೆ ನೀಡಿದರು. ಬಜರಂಗ ದಳ ಮತ್ತು ಆರ್‌ಎಸ್‌ಎಸ್‌ನವರ ಹೆದರಿಕೆಯಿಂದಾಗಿ ಕೆಲವು ನಿರಾಶ್ರಿತರು ಚಿದಂಬರಂ ಅವರಲ್ಲಿ ಮಾತನಾಡಲು ಹಿಂದೇಟು ಹಾಕಿದಾಗ, ನೀವೇನೂ ಭಯಪಡಬೇಡಿ, ತಪ್ಪಿತಸ್ಥರನ್ನು ತನಿಖೆಗೆ ಒಳಪಡಿಸಿ ಶಿಕ್ಷಿಸುವುದಾಗಿ ಭರವಸೆ ನೀಡಿದರು.ಗೃಹ ಸಚಿವರು ಒರಿಸ್ಸಾದ ಮಂದೈಕಾ, ರಾಹಿಕೋಲಾ, ತಿನಿಗಿಯಾ ಮತ್ತು ತಿಕಾಬಾಲಿ ಜಿಲ್ಲೆಗಳಲ್ಲಿರುವ ಆಶ್ರಯ ಪಡೆದಿರುವ ಸುಮಾರು 1,500 ಜನರನ್ನು ಭೇಟಿ ಮಾಡಿ, ಪರಿಶೀಲನೆ ನಡೆಸಿದರು. |