ಕೆಲವು ಕಾಲೇಜುಗಳಲ್ಲಿ ರ‌್ಯಾಗಿಂಗ್ ಪ್ರಕರಣಗಳು ಘಟಿಸಿದ ಬಗ್ಗೆ ರಾಷ್ಟ್ರಪತಿ ಪ್ರತಿಭಾಪಾಟೀಲ್ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಶಿಕ್ಷಣಕ್ಷೇತ್ರದಲ್ಲಿ ಕಪ್ಪುಚುಕ್ಕಿಯ ನಿವಾರಣೆಗೆ ನೆರವು ನೀಡುವಂತೆ ರಾಜ್ಯಪಾಲರಿಗೆ ತಿಳಿಸಿದ್ದಾರೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳಾದ ರಾಜ್ಯಪಾಲರಿಗೆ ಅವರು ಬರೆದಿರುವ ಪತ್ರದಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ನಿಯಂತ್ರಣ ವ್ಯವಸ್ಥೆ ಕುರಿತು ಮತ್ತು ರ‌್ಯಾಗಿಂಗ್ ತಡೆಗೆ ಕಾನೂನಿನ ಪ್ರತಿರಕ್ಷಣೆಯ ವಿಶ್ವಾಸಾರ್ಹ ವಿನ್ಯಾಸ ರಚಿಸಬೇಕೆ ಎನ್ನುವುದನ್ನು ಪರಿಶೀಲಿಸುವಂತೆ ತಿಳಿಸಿದ್ದಾರೆ. ರ‌್ಯಾಗಿಂಗ್ ಕುರಿತಂತೆ ಸುಪ್ರೀಂಕೋರ್ಟ್ ಕಠಿಣ ನಿಲುವು ತೆಗೆದುಕೊಂಡಿದ್ದು, ರ‌್ಯಾಗಿಂಗ್ ತಡೆಗೆ ನಿಯಮಗಳು ಸೇರಿದಂತೆ ಕಾನೂನುಗಳು ಈಗಾಗಲೇ ಜಾರಿಗೆ ಬಂದಿರುವುದರತ್ತ ಅವರು ಗಮನಸೆಳೆದರು.
ರ‌್ಯಾಗಿಂಗ್ ತಡೆಯುವುದು ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ಮತ್ತು ಶಿಕ್ಷಕರ ಮುಖ್ಯ ಜವಾಬ್ದಾರಿ ಎಂದು ಅವರು ಹೇಳಿದರು. ಆದರೆ ತಂದೆ, ತಾಯಿಗಳು ಮತ್ತು ಪೋಷಕರು ತಮ್ಮ ಮಕ್ಕಳಿಗೆ ಕಿರಿಯ ವಿದ್ಯಾರ್ಥಿಗಳ ಜತೆ ಜವಾಬ್ದಾರಿಯಿಂದ ವರ್ತಿಸುವಂತೆ ಹಿತವಚನ ಹೇಳಬೇಕೆಂದು ಅವರು ತಿಳಿಸಿದರು. |