ಗ್ರಾಮೀಣ ಪ್ರದೇಶಗಳಲ್ಲಿ ಸೌಲಭ್ಯಗಳ ಕೊರತೆಯಿಂದ ವೈದ್ಯರು ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ಹಿಂಜರಿಯುತ್ತಿದ್ದಾರೆ. ಇದರಿಂದಾಗಿ ಹಳ್ಳಿಗಳಲ್ಲಿ ವೈದ್ಯಕೀಯ ಸೌಲಭ್ಯ ಕಲ್ಪಿಸಲು ಸರ್ಕಾರಕ್ಕೆ ತೀವ್ರ ತೊಡಕುಂಟಾಗುತ್ತಿದೆ. ಈ ಕಾರಣದಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವ ವೈದ್ಯರ ಓಲೈಕೆಗೆ ಆಕರ್ಷಣೀಯ ಪ್ರೋತ್ಸಾಹಕ ಧನದ ಯೋಜನೆಯೊಂದನ್ನು ಸರ್ಕಾರ ತಯಾರಿಸಿದೆ.
ಹೊರವಲಯದ ಪರ್ವತ ಪ್ರದೇಶ ಮತ್ತು ನಕ್ಸಲೀಯ ಪೀಡಿತ ಕೆಂಪು ಕಾರಿಡರ್ ಪ್ರದೇಶಗಳಲ್ಲಿ ವೈದ್ಯರು ಕಾಲಿಡಲು ಹೆದರುತ್ತಿದ್ದಾರೆ.ಇದರಿಂದಾಗಿ ಕುಗ್ರಾಮಗಳಲ್ಲಿ ಆರೋಗ್ಯ ಸೇವೆ ನೀಡುವುದು ಸರ್ಕಾರಕ್ಕೆ ಸಮಸ್ಯೆಯಾಗಿರುವ ಹಿನ್ನೆಲೆಯಲ್ಲಿ ವೈದ್ಯರಿಗೆ ಆರ್ಥಿಕ ಉತ್ತೇಜಕಗಳನ್ನು ನೀಡಲು ಆರೋಗ್ಯ ಸಚಿವಾಲಯ ಯೋಜಿಸಿದೆ. ನಗರಗಳಿಂದ ಹೊರಕ್ಕೆ ವೈದ್ಯರು ಸೇವೆ ಸಲ್ಲಿಸುವಂತಾಗಲು ಗ್ರಾಮಗಳಲ್ಲಿ ಸೇವೆ ಸಲ್ಲಿಸುವ ವೈದ್ಯರಿಗೆ ಶೇ.25ರಿಂದ ಶೇ.50ರಷ್ಟು ಆಕರ್ಷಣೀಯ ವೇತನ ಹೆಚ್ಚಳವನ್ನು ನೀಡುವ ಪ್ರಸ್ತಾವನೆಯನ್ನು ಆರೋಗ್ಯ ಸಚಿವಾಲಯ ಮಂಡಿಸಿದೆ.
ದುರ್ಗಮ ಪ್ರದೇಶಗಳಲ್ಲಿ ನಿಯೋಜಿತರಾದ ವೈದ್ಯರಿಗೆ ಶೇ.25ರಷ್ಟು ವೇತನ ಹೆಚ್ಚಳ ಮತ್ತು ರಸ್ತೆಸಂಪರ್ಕವಿಲ್ಲದ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದರೆ ಶೇ.50 ವೇತನ ಹೆಚ್ಚಳವನ್ನು ನೀಡಲಾಗುವುದು.ನಕ್ಸಲ್ ಪೀಡಿತ ಜಿಲ್ಲೆಗಳಾದ ಜಾರ್ಖಂಡ್, ಚತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ಬಿಹಾರ, ಈಶಾನ್ಯದ ಹೊರಪ್ರದೇಶಗಳು, ಜಮ್ಮು ಕಾಶ್ಮೀರದ ಒಳಪ್ರದೇಶಗಳು, ರಾಜಸ್ಥಾನದ ಥಾರ್ ಮರುಭೂಮಿ ಪ್ರದೇಶ, ಲಕ್ಷದ್ವೀಪ ಹಾಗೂ ಅಂಡಮಾನ್, ನಿಕೋಬಾರ್ ದ್ವೀಪಗಳನ್ನು ಅತ್ಯಂತ ಕ್ಲಿಷ್ಟ ಪ್ರದೇಶಗಳೆಂದು ಗುರುತಿಸಲಾಗಿದೆ.
ನಿರ್ದಿಷ್ಟ ಅಗತ್ಯಗಳ ಆಧಾರದ ಮೇಲೆ ಉತ್ತೇಜಕ ಕೊಡುಗೆಗಳನ್ನು ನೀಡಲು ವಿವಿಧ ರಾಜ್ಯಗಳಿಗೆ ಸೂಚಿಸಲಾಗಿದೆ. ಈ ಯೋಜನೆಯ ಪ್ರಕಾರ,ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಗುತ್ತಿಗೆ ಆಧಾರದ ಮೇಲೆ ನಿಯೋಜಿತರಾದ ತಜ್ಞ ವೈದ್ಯರಿಗೆ ಆರಂಭದ ವೇತನ ಮಾಸಿಕ 55,000 ರೂ.ಗಳು. ಮಧ್ಯಪ್ರದೇಶದಲ್ಲಿ ಮಕ್ಕಳ ತಜ್ಞರಿಗೆ ಮಾಸಿಕ 35,000 ವೇತನದ ಭರವಸೆ ನೀಡಲಾಗಿದ್ದರೆ ಚತ್ತೀಸ್‌ಗಢ ಮತ್ತು ಬಿಹಾರದಲ್ಲಿ ವೈದ್ಯರಿಗೆ ನಿವಾಸದ ಸೌಲಭ್ಯ ಒದಗಿಸುವ ಭರವಸೆ ನೀಡಿವೆ.
ಅಸ್ಸಾಂ, ಕೇರಳದಲ್ಲಿ ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಸಂಜೆ ಒಪಿಡಿಗಳನ್ನು ನಡೆಸುವ ವೈದ್ಯರಿಗೆ ಶೇ.50 ವೇತನ ಹೆಚ್ಚಳ ನೀಡಲಾಗುವುದು.ಸ್ನಾತಕೋತ್ತರ ಶಿಕ್ಷಣಕ್ಕೆ ಪ್ರವೇಶ ಬಯಸುವ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಬಹುತೇಕ ಗ್ರಾಮೀಣ ಸೇವೆ ಕಡ್ಡಾಯ ಮಾಡಿರುವುದಕ್ಕೆ ನೀಡುವ ಪ್ರೋತ್ಸಾಹಕಗಳಿಗೆ ಹೆಚ್ಚುವರಿಯಾಗಿ ಈ ಪ್ರೋತ್ಸಾಹಕಗಳನ್ನು ನೀಡಲಾಗುತ್ತದೆ. |