ನೈರುತ್ಯ ದೆಹಲಿಯ ಪೊಲೀಸ್ ಠಾಣೆಯೊಂದರಲ್ಲಿ ಸ್ಟೇಶನ್ ಹೌಸ್ ಮಾಸ್ಟರ್ ಮತ್ತು ಇತರ ನಾಲ್ವರು ತನ್ನ ಮೇಲೆ ಅತ್ಯಾಚಾರ ಎಸಗಿದರು ಎಂಬುದಾಗಿ ಆಪಾದಿಸಿದ್ದ ಮಹಿಳೆ, ಕೋರ್ಟ್‌ನಲ್ಲಿ 'ಪೊಲೀಸರು ತನ್ನ ಮೇಲೆ ಅತ್ಯಾಚಾರ ನಡೆಸಿದರು ಎಂಬ ಆರೋಪ ಸುಳ್ಳು' ಎಂದು ಹೇಳಿಕೆ ನೀಡುವ ಮೂಲಕ ಪ್ರಕರಣಕ್ಕೆ ಯು ಟರ್ನ್ ನೀಡಿದ್ದಾಳೆ.
ನೈರುತ್ಯ ದೆಹಲಿಯ ಪೊಲೀಸ್ ಠಾಣೆಯೊಂದರಲ್ಲಿ ಸ್ಟೇಶನ್ ಹೌಸ್ ಮಾಸ್ಟರ್ ಮತ್ತು ಇತರ ನಾಲ್ವರು ತನ್ನ ಮೇಲೆ ಅತ್ಯಾಚಾರ ಎಸಗಿದರು ಎಂಬುದಾಗಿ 35ರ ಹರೆಯದ ಮಹಿಳೆಯೊಬ್ಬಳು ದೂರು ಸಲ್ಲಿಸಿದ್ದರು. ಆದರೆ ಗುರುವಾರ ನಗರ ಮ್ಯಾಜಿಸ್ಟ್ರೇಟ್ ಎದುರು ಹೇಳಿಕೆ ನೀಡುವ ಸಂದರ್ಭದಲ್ಲಿ, ಪೊಲೀಸರು ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆಂಬ ಆರೋಪದಲ್ಲಿ ಹುರುಳಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತನ್ನ ಮೇಲೆ ಸ್ಟೇಶನ್ ಹೌಸ್ ಮಾಸ್ಟರ್ ಮತ್ತು ನಾಲ್ವರು ಪೊಲೀಸರು ಅತ್ಯಾಚಾರ ನಡೆಸಿದ್ದಾರೆಂಬ ಪ್ರಕರಣದ ಕುರಿತು ಕ್ರೈಂ ಬ್ರಾಂಚ್ ಅಧಿಕಾರಿಗಳು ತನಿಖೆ ನಡೆಸಿದ್ದರು.
ಆಕೆ ಠಿಕಾಣಿ ಹೂಡಿರುವ ಪ್ರದೇಶದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದು, ಆ ಬಗ್ಗೆ ಸ್ಟೇಶನ್ ಹೌಸ್ ಮಾಸ್ಟರ್ ಪ್ರದೀಪ್ ಕುಮಾರ್ ಕಠಿಣ ಕ್ರಮ ಕೈಗೊಂಡಿರುವ ಪರಿಣಾಮ ಅವರಿಗೆಲ್ಲಾ ತುಂಬಾ ತೊಂದರೆಯಾಗಿತ್ತು. ತಮ್ಮ ದಂಧೆಗೆ ಅಡ್ಡಗಾಲಾಗಿರುವ ಸ್ಟೇಶನ್ ಹೌಸ್ ಮಾಸ್ಟರ್ ಮೇಲೆಯೇ ಇಂತಹ ಗುರುತರವಾದ ಆಪಾದನೆ ಹೊರಿಸಿದರೆ ಅವರನ್ನು ವರ್ಗಾಯಿಸುತ್ತಾರೆ ಇಲ್ಲ ಅಮಾನತು ಮಾಡುತ್ತಾರೆ ಎಂಬುದಾಗಿ ಆಲೋಚಿಸಿ ಇಂತಹ ಸುಳ್ಳು ಆರೋಪ ಹೊರಿಸಿರುವುದಾಗಿ ದೆಹಲಿ ಪೊಲೀಸ್ ವಕ್ತಾರ ರಾಜನ್ ಭಾಗತ್ ವಿವರಿಸಿದ್ದಾರೆ.
ಆಕೆಯ ಸುಳ್ಳು ಆರೋಪದ ವಿರುದ್ಧ ನೀವೇನಾದರು ಪ್ರಕರಣವನ್ನು ದಾಖಲಿಸಿಕೊಂಡಿದ್ದೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಕರಣದ ಕುರಿತು ತನಿಖೆ ಇನ್ನೂ ಮುಂದುವರಿದಿದೆ. ಅಲ್ಲದೆ ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಕಾಯುತ್ತಿರುವುದಾಗಿ ಹೇಳಿದರು. ಆಕೆ ಮೊದಲು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಯಿತು ಎಂದು ಹೇಳಿಕೆ ನೀಡಿದ್ದಳು. ನಂತರ ಇಲ್ಲ ಎಂದು ತಿರುಚಿದ್ದಳು. ಆ ನಿಟ್ಟಿನಲ್ಲಿ ನಾನು ಆಕೆಯ ಹೇಳಿಕೆಗಳನ್ನು ಪರಿಶೀಲಿಸಿದ ನಂತರ ಕಾನೂನು ಪ್ರಕಾರ ನ್ಯಾಯಾಲಯಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದರು.
ನೈರುತ್ಯ ದೆಹಲಿಯ ಪೊಲೀಸ್ ಠಾಣೆಯೊಂದರಲ್ಲಿ ಸ್ಟೇಶನ್ ಹೌಸ್ ಮಾಸ್ಟರ್ ಮತ್ತು ಇತರ ನಾಲ್ವರು ತನ್ನ ಮೇಲೆ ಅತ್ಯಾಚಾರ ಎಸಗಿದರು ಎಂಬುದಾಗಿ ಮಹಿಳೆಯೊಬ್ಬಳು ದೂರು ಸಲ್ಲಿಸಿದ್ದರು. ಘಟನೆ ಕುರಿತಂತೆ ರೊಚ್ಚಿಗೆದ್ದಿರುವ ಜನತೆ ಪ್ರತಿಭಟನೆಗೆ ಇಳಿದು ಕಲ್ಲುತೂರಾಟ ನಡೆಸಿದ ಘಟನೆಯೂ ಬುಧವಾರ ನಡೆದಿತ್ತು.
ಇಂದೇರ್‌ಪುರಿಯ ಕೊಳಗೇರಿಯೊಂದರ ನಿವಾಸಿಯಾಗಿರುವ ಈ ಮಹಿಳೆಯನ್ನು ತನಿಖೆಗಾಗಿ ಪೊಲೀಸ್ ಠಾಣೆಗೆ ಸೋಮವಾರ ರಾತ್ರಿ ಕರೆದೊಯ್ದಿರುವ ಪೊಲೀಸರು ಈ ದುಷ್ಕೃತ್ಯ ಎಸಗಿದ್ದಾರೆ ಎಂದು ದೂರಲಾಗಿತ್ತು. ಈಕೆಯ ಪತಿ ಬೆಟ್ಟಿಂಗ್ ವ್ಯವಹಾರದಲ್ಲಿ ತೊಡಗಿದ್ದಾನೆ ಎಂದು ಹೇಳಲಾಗಿದೆ.
ಈ ಸಂದರ್ಭದಲ್ಲಿ ತನ್ನಮೇಲೆ ಲೈಂಗಿಕ ಅತ್ಯಾಚಾರ ಎಸಗಲಾಯಿತು ಎಂದು ದೂರಿರುವ ಮಹಿಳೆಯು, ಒಂದೊಮ್ಮೆ ಈ ವಿಚಾರವನ್ನು ಯಾರ ಬಳಿಯಾದರೂ ಬಾಯಿಬಿಟ್ಟಲ್ಲಿ ಅದರ ಪರಿಣಾಮವನ್ನು ಎದುರಿಸಬೇಕಾದೀತು ಎಂಬುದಾಗಿ ಅತ್ಯಾಚಾರ ಎಸಗಿರುವ ಪೊಲೀಸರು ಬೆದರಿಕೆ ಹಾಕಿರುವುದಾಗಿ ಆಕೆ ದೂರಿನಲ್ಲಿ ತಿಳಿಸಿದ್ದಳು. |