ನ್ಯಾಯಮೂರ್ತಿಗಳ ಆಸ್ತಿಪಾಸ್ತಿ ಹಾಗೂ ಋಣಭಾರವನ್ನು ಸಾರ್ವಜನಿಕವಾಗಿ ಪ್ರಕಟಿಸಲು ಅನುವು ಮಾಡಿಕೊಡುವ ನೂತನ ಮಸೂದೆಯನ್ನು ಬರುವ ಅಧಿವೇಶನದಲ್ಲಿ ಮಂಡಿಸುವುದಾಗಿ ಕಾನೂನು ಸಚಿವ ಎಂ.ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.
ಸರ್ಕಾರದ ಮೊದಲ ನೂರು ದಿನಗಳ ಯೋಜನೆಯ ಭಾಗವಾಗಿ ಈ ಮಸೂದೆಯನ್ನು ಮಂಡಿಸಲಾಗುವುದು ಎಂದ ಅವರು, ನ್ಯಾಯಮೂರ್ತಿಗಳ ವಿರುದ್ಧ ಭ್ರಷ್ಟಾಚಾರ ಪ್ರಕರಣಗಳ ತನಿಖೆ ನಡೆಸುವುದಕ್ಕೆ ಅವಕಾಶ ಕಲ್ಪಿಸುವ ಮತ್ತೊಂದು ಮಸೂದೆಯನ್ನೂ ಸರ್ಕಾರ ಸಿದ್ದಪಡಿಸುತ್ತಿದೆ ಎಂದು ಹೇಳಿದರು.
ಆಸ್ತಿ ಬಹಿರಂಗಕ್ಕೆ ಸಂಬಂಧಪಟ್ಟ ಕಡತವನ್ನು ಈಗಾಗಲೇ ಕಾನೂನು ಕಾರ್ಯದರ್ಶಿಯವರಿಗೆ ಕಳುಹಿಸಿಕೊಟ್ಟಿದ್ದೇನೆ. ಇನ್ನೆರಡು ದಿನಗಳಲ್ಲಿ ಅವರು ಅದರ ಅಧ್ಯಯನ ಮುಗಿಸುತ್ತಿದ್ದಂತೆ ಅದನ್ನು ಸಚಿವ ಸಂಪುಟದ ಮುಂದಿಡಲಾಗುವುದು. ಜುಲೈ 2ರಿಂದ ಆರಂಭವಾಗುವ ಬಜೆಟ್ ಅಧಿವೇಶನದಲ್ಲಿ ಸಂಬಂಧಪಟ್ಟ ಕರಡು ಮಸೂದೆಯನ್ನು ಮಂಡಿಸಲಾಗುವುದು ಎಂದು ಪತ್ರಕರ್ತರ ಸಂಘದ ಸಂವಾದ ಕಾರ್ಯಕ್ರಮದಲ್ಲಿ ಹೇಳಿದರು.
ಇನ್ನು ಮುಂದೆ ನ್ಯಾಯಮೂರ್ತಿಗಳ ಆಸ್ತಿ ಮತ್ತು ಋಣಭಾರ ಸಾರ್ವಜನಿಕವಾಗಿ ಪ್ರಕಟವಾಗಲಿದೆ. ಇದಕ್ಕೆ ನ್ಯಾಯಮೂರ್ತಿಗಳ ವಿರೋಧವಿದೆ ಎಂದು ಭಾವಿಸುವುದು ತಪ್ಪು. ಈ ವಿಷಯದಲ್ಲಿ ತನಗೆ ನ್ಯಾಯಾಂಗದೊಂದಿಗೆ ಯಾವ ಸಂಘರ್ಷವೂ ಇಲ್ಲ. ನ್ಯಾಯಾಂಗವನ್ನು ಸಂಪೂರ್ಣ ವಿಶ್ವಾಸಕ್ಕೆ ತೆಗೆದುಕೊಂಡು ಈ ಮಸೂದೆ ಮಂಡಿಸಲಾಗುವುದು ಎಂದರು.
|