ಪಾಕಿಸ್ತಾನದ ಬೇಹುಗಾರಿಕಾ ಇಲಾಖೆ ಪರವಾಗಿ ಕೆಲಸ ಮಾಡುತ್ತಿದ್ದ ಇಬ್ಬರು ಭಾರತೀಯರನ್ನು ಜೈಲಸ್ಮೇರ್‌ನಿಂದ ಪೊಲೀಸರು ಬಂಧಿಸಿದ್ದು, ಇದು ಬಲುದೊಡ್ಡ ವಿದ್ರೋಹಿ ಕಾರ್ಯತಂತ್ರವೊಂದರ ಸಣ್ಣ ಭಾಗವಷ್ಟೇ ಎಂದು ಹೇಳಲಾಗುತ್ತಿದೆ.
ಭಾರತ-ಪಾಕಿಸ್ತಾನ ಗಡಿಭಾಗದಲ್ಲಿ ಭಾರತೀಯ ಪೌರತ್ವ ಇರುವವರೇ ಪಾಕಿಸ್ತಾನ ಪರವಾಗಿ ಬೇಹುಗಾರಿಕೆ ನಡೆಸುತ್ತಿರುವುದು ಭದ್ರತಾ ಪಡೆ ಮತ್ತು ಗುಪ್ತ ದಳಗಳಿಗೆ ತಲೆನೋವಿನ ಸಂಗತಿಯಾಗಿದೆ.
ಬಂಧಿತರನ್ನು ಮೋರೇ ಖಾನ್ ಮತ್ತು ಅಬ್ಬಾನ್ ಖಾನ್ ಎಂದು ಗುರುತಿಸಲಾಗಿದ್ದು, ಇವರಿಬ್ಬರೂ ರಾಜಸ್ಥಾನದ ಖುಯ್ಯಾಲ ಗ್ರಾಮದವರು. ಫೋನ್ ಬಳಸಿ ಇವರು ಮಾಹಿತಿಯನ್ನು ಪಾಕಿಸ್ತಾನಿ ಏಜೆನ್ಸಿಗಳಿಗೆ ರವಾನಿಸುತ್ತಿದ್ದು ಇದಕ್ಕಾಗಿ ಸಾಕಷ್ಟು ಹಣ ಪಡೆಯುತ್ತಿದ್ದರು ಎಂದು ಮೂಲಗಳು ವರದಿ ಮಾಡಿವೆ.
ಗಡಿಯಲ್ಲಿರುವ ಭಾರತೀಯ ಸೇನೆಯ ಮೂಲಸೌಕರ್ಯಗಳು, ಇತರ ಸೌಲಭ್ಯಗಳು, ಹೆಲಿಪ್ಯಾಡ್‌ಗಳು ಮತ್ತು ಅಲ್ಲಿನ ತೈಲ ಹಾಗೂ ನೀರಿನ ಪೈಪ್ ಲೈನ್ ಇತ್ಯಾದಿ ಕುರಿತು ಮಾಹಿತಿ ರವಾನಿಸುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ. 'ಅವರಿಬ್ಬರೂ ಪಾಕಿಸ್ತಾನಕ್ಕೂ ಭೇಟಿ ನೀಡಿದ್ದರು. ಅವರ ಖಾತೆಗಳಿಗೆ ಹಣ ಜಮೆಯಾಗುತ್ತಿತ್ತು' ಎಂದು ಗುಪ್ತ ದಳದ ಎಡಿಜಿ ಎಂ.ಕೆ.ದೇವರಾಜನ್ ತಿಳಿಸಿದ್ದಾರೆ.
ಹೀಗೆ ಸಿಕ್ಕಿಬಿದ್ದವರಲ್ಲಿ ಇವರೇ ಮೊದಲಿಗರೇನಲ್ಲ. ಈ ಹಿಂದೆ ಇದೇ ಹಳ್ಳಿಯ ಮೌಲಾ ಬಕ್ಷ್ ಎಂಬಾತನನ್ನೂ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಬಂಧಿಸಲಾಗಿತ್ತು. |