ಚೆನ್ನೈನ ಫ್ರಾಂಟಿಯರ್ ಲೈಫ್‌ಲೈನ್ ಆಸ್ಪತ್ರೆಯಲ್ಲಿ ಸುಮಾರು 48 ಗಂಟೆಗಳ ಒತ್ತೆಯಾಳು ನಾಟಕ ಶನಿವಾರ ಸುಖಾಂತ್ಯಗೊಂಡಿದೆ. ಆಸ್ಪತ್ರೆಯಲ್ಲಿ ಹೃದಯಬೇನೆ ಚಿಕಿತ್ಸೆಗೆ ಒಳಗಾಗಿದ್ದ 10 ಮಕ್ಕಳ ಬಿಲ್ ಪಾವತಿಯಾಗಿಲ್ಲವೆಂದು ಅವರನ್ನು ಆಸ್ಪತ್ರೆಯಲ್ಲಿ ಬಂದಿಯಾಗಿಡಲಾಗಿತ್ತು.
ಎನ್‌ಜಿಒ ಮತ್ತು ಆಸ್ಪತ್ರೆ ಅಧಿಕಾರಿಗಳ ನಡುವೆ ಒಪ್ಪಂದ ಉಂಟಾಗಿ ಸರ್ಕಾರೇತರ ಸಂಸ್ಥೆಯನ್ನು ಪ್ರತಿನಿಧಿಸುವ ಗಯಾನದ ಮಾಜಿ ಪ್ರಥಮ ಮಹಿಳೆ ವರ್ಶಿನಿ ಸಿಂಗ್ 6 ತಿಂಗಳಲ್ಲಿ ಎಲ್ಲ ವೈದ್ಯಕೀಯ ವೆಚ್ಚ ಪಾವತಿ ಮಾಡುವುದಾಗಿ ಷರತ್ತಿನ ಆಧಾರದ ಮೇಲೆ ಎಲ್ಲ 10 ಮಕ್ಕಳನ್ನು ಗಯಾನಕ್ಕೆ ಹಿಂತಿರುಗಲು ಅವಕಾಶ ನೀಡಲಾಯಿತು.
ಶುಕ್ರವಾರ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಗಯಾನದ 10 ಮಂದಿ ಮಕ್ಕಳು ಮತ್ತು ಇಬ್ಬರು ವಯಸ್ಕರನ್ನು ಬಂಧಿಗಳಾಗಿ ಇಡಲಾಯಿತು. ಆಸ್ಪತ್ರೆಗೆ ಕೊಡಬೇಕಿದ್ದ 91,250 ಡಾಲರ್(45 ಲಕ್ಷ. ರೂ.) ಹಣ ಪಾವತಿಯಲ್ಲಿ ವಿಫಲರಾಗಿದ್ದೇ ಇದಕ್ಕೆ ಕಾರಣ. ಗಯಾನದ ಮಾಜಿ ಪ್ರಥಮ ಮಹಿಳೆ ವರ್ಶಿನಿ ಸಿಂಗ್ ಅವರು ಈ ಮಕ್ಕಳಿಗೆ ಶಸ್ತ್ರಚಿಕಿತ್ಸೆ ಮಾಡುವ ಸಲುವಾಗಿ ಜೂನ್ 9ರಂದು ಕರೆತಂದಿದ್ದರು.
ಸಂಜೆ 5 ಗಂಟೆಗೆ ವಿಮಾನನಿಲ್ದಾಣಕ್ಕೆ ಹೊರಡಲು ಗಯಾನ ತಂಡ ತಯಾರಿ ನಡೆಸುತ್ತಿದ್ದಾಗ ಹಣ ಪಾವತಿ ಮಾಡದೇ ಅವರನ್ನು ಬಿಡುಗಡೆ ಮಾಡುವುದಿಲ್ಲವೆಂದು ವೈದ್ಯರು ಖಡಾಖಂಡಿತವಾಗಿ ತಿಳಿಸಿದರು. ಕ್ಯಾಶುಯಲ್ಟಿ ವಾರ್ಡ್ ಹೊರಗಿನ ಆವರಣದಲ್ಲಿ ಅವರನ್ನು ಕೂಡಿಡಲಾಯಿತು. ಮಾಧ್ಯಮದವರು, ಪೊಲೀಸರು ಎಲ್ಲರಿಗೂ ಕರೆಕಳುಹಿಸಿ, ದೂರು ದಾಖಲಿಸಲಾಯಿತು. ಮಕ್ಕಳು 'ದಯವಿಟ್ಟು ನೆರವು ನೀಡಿ' ಎಂಬ ಭಿತ್ತಿಚಿತ್ರವನ್ನು ಹಿಡಿದು ಹೊರಗೆ ಕಾಯುತ್ತಿದ್ದ ಸುದ್ದಿಗಾರರಿಗೆ ಪ್ರದರ್ಶಿಸಿದರು.
'ನಾವು 2005ರಿಂದ ಇಲ್ಲಿಗೆ ಭೇಟಿ ನೀಡುತ್ತಿದ್ದು, ಪ್ರತಿ ಬಾರಿ ಬರುವಾಗ ರೋಗಿಗಳನ್ನು ಕರೆತರುತ್ತೇವೆ. ಬಳಿಕ ಹಿಂತಿರುಗಿ ಸೈಕಲ್ ಸ್ಪರ್ಧೆ, ಕಾಮೆಡಿ ಶೋ ಮುಂತಾದ ಚಟುವಟಿಕೆ ಮೂಲಕ ಹಣ ಸಂಗ್ರಹಿಸಿ ಆಸ್ಪತ್ರೆ ಬಿಲ್ ಪಾವತಿ ಮಾಡುತ್ತಿದ್ದೆವು. ಈಗ ನಮ್ಮ ಬಳಿ ಹಣವಿಲ್ಲ. ಹಣ ಸಂಗ್ರಹಿಸಿದ ಬಳಿಕ ಪಾವತಿ ಮಾಡುತ್ತೇವೆ. ಆದರೆ ಗಡುವು ನೀಡುವುದಕ್ಕೆ ಆಗುವುದಿಲ್ಲವೆಂದು' ವರ್ಶಿನಿ ಸಿಂಗ್ ಹೇಳಿದರು.
ಆಸ್ಪತ್ರೆಯ ನಿರ್ದೇಶಕಿ ಡಾ. ಸೋಮಾ ಗುಹಾತಾಕುರ್ತಾ ಈ ಕುರಿತು ವಿವರಣೆ ನೀಡುತ್ತಾ, 'ನಾವು ಬಿಲ್ ಕ್ಲಿಯರ್ ಮಾಡಬೇಕೆಂದು ಮುಂಚಿತವಾಗೇ ತಿಳಿಸಿದ್ದೆವು. ನಮ್ಮ ಪತ್ರಕ್ಕೆ ನಕಾರ ಸೂಚಿಸದೇ ಇದ್ದಿದ್ದರಿಂದ ಶಸ್ತ್ರಚಿಕಿತ್ಸೆ ಮಾಡಿದೆವು. ಅವರು ಈಗಾಗಲೇ ಹಣ ಸಂಗ್ರಹ ಮಾಡಿದ್ದರೂ ನಮಗೆ ಪಾವತಿ ಮಾಡುವ ಇಚ್ಛೆಯಿಲ್ಲ' ಎಂದು ಹೇಳಿದ್ದಾರೆ.'ನಮ್ಮ ಭಾರತೀಯ ರೋಗಿಗಳಿಗೆ ಉಚಿತ ಚಿಕಿತ್ಸೆ ಸೌಲಭ್ಯ ಸಿಗದಿರುವಾಗ ಅವರಿಗೆ ಉಚಿತ ಚಿಕಿತ್ಸೆ ನಾವು ಏಕೆ ನೀಡಬೇಕು. ನಮ್ಮದೇನೂ ದತ್ತಿ ಸಂಸ್ಥೆಯಲ್ಲ 'ಎಂದು ಮುಖ್ಯ ಆಡಳಿತಾಧಿಕಾರಿ ಜೋಸ್ ಮನಾವಲನ್ ಧಮಕಿ ಹಾಕಿದ್ದರು. |