ಅಂತ್ಯಕ್ರಿಯೆ ಬಳಿಕ ಅರೆಸುಟ್ಟ ಮಾನವ ದೇಹದ ಭಾಗಗಳನ್ನು ಮುಕ್ಕುತ್ತಿದ್ದ ನಾಲ್ವರನ್ನು ಪಾಲ್ವಾಲ್ ನಗರದಲ್ಲಿ ಗುರುವಾರ ರಾತ್ರಿ ಬಂಧಿಸಲಾಗಿದೆ. ಸ್ಮಶಾನದಲ್ಲಿ ಇಂತಹ ಘೋರ ದೃಶ್ಯವನ್ನು ರಾತ್ರಿಸಮಯ ವೀಕ್ಷಿಸಿ ಭಯವಿಹ್ವಲನಾದ ಕಾವಲುಗಾರ ದೂರು ನೀಡಿದ. ಕೂಡಲೇ ಗುಂಪು ಸೇರಿದ ಜನರು ನರಭಕ್ಷಕರಿಗೆ ಚೆನ್ನಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಿದರೆಂದು ತಿಳಿದುಬಂದಿದೆ.
ಪೊಲೀಸರು ಮುನ್ಸಿಪಾಲಿಟಿ ಕಾರ್ಮಿಕ ಸಾಂತ್ರಾಂ, ಸುನಿಲ್, ರಮೇಶ್ ಮತ್ತು ಕಮಲ್ ಎಂಬವರ ಮೇಲೆ ಕೇಸು ದಾಖಲಿಸಿದ್ದಾರೆ.ತನ್ನ ತಾಯಿಯ ಅಂತ್ಯಕ್ರಿಯೆ ವಿಧಿ ಮುಗಿಸಿದ ಚಾವೆಂದರ್ ಸಿಂಗ್ ಚಿತಾಗಾರವನ್ನು ಬಿಟ್ಟುಹೋದರು. ಚಿತೆ ಉರಿದುಹೋಗುವ ತನಕ ನೋಡಿಕೊಳ್ಳುವಂತೆ ಸುನಿಲ್‌ಗೆ ಸ್ವಲ್ಪ ಹಣ ನೀಡಿ ತೆರಳಿದ್ದರು. ರಾತ್ರಿ ಸಾಂತ್ರಾಮ್, ಅವನ ಪುತ್ರ ಮತ್ತಿಬ್ಬರು ಸ್ಮಶಾನಕ್ಕೆ ಆಗಮಿಸಿದರು.
ಅವರಲ್ಲೊಬ್ಬ ಅರೆಬೆಂದ ದೇಹವನ್ನು ಚಿತೆಯಿಂದ ಎಳೆದು ದೇಹದ ಭಾಗಗಳನ್ನು ತಿನ್ನಲು ಆರಂಭಿಸಿದ. ಕಾವಲುಗಾರ ಅಜಯ್ ಇದನ್ನು ಗಮನಿಸಿ ಸ್ಮಶಾನದ ಆಡಳಿತ ಸಮಿತಿ ಸದಸ್ಯ ಕೃಷ್ಣನ್ ಕುಮಾರ್‌ಗೆ ಸುದ್ದಿ ಮುಟ್ಟಿಸಿದ. ತಕ್ಷಣವೇ ಜನರ ಗುಂಪು ಸೇರಿ ಆರೋಪಿಗಳಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದರೆಂದು ಹೇಳಲಾಗಿದೆ. |