ಸಲಿಂಗಕಾಮವನ್ನು ಅಪರಾಧ ಎಂದು ಪರಿಗಣಿಸುವ ಭಾರತೀಯ ದಂಡ ಸಂಹಿತೆಯ(ಐಪಿಸಿ) ವಿವಾದಾತ್ಮಕ ಕಲಂ ರದ್ದುಪಡಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಈ ಕುರಿತು ಒಮ್ಮತ ಮೂಡಿಸಲು ಸದ್ಯವೇ ಸಭೆಯೊಂದನ್ನು ನಡೆಸಲಿದೆ. ಗೃಹಸಚಿವ ಪಿ.ಚಿದಂಬರಂ ಈ ಸಭೆಯ ಅಧ್ಯಕ್ಷತೆ ವಹಿಸುವರು. ಒಂದೇ ಲಿಂಗಕ್ಕೆ ಸೇರಿದ ವ್ಯಕ್ತಿಗಳ ನಡುವೆ ದೈಹಿಕ ಸಂಬಂಧಕ್ಕೆ ನಿಷೇಧ ಹೇರುವ ಐಪಿಸಿಯ 377ನೇ ಕಲಂ ಕುರಿತು ಸಭೆ ಚರ್ಚಿಸಲಿದೆ.
ಗೃಹಸಚಿವ ಚಿದಂಬರಂ ಹಾಗೂ ಕಾನೂನು ಸಚಿವ ವೀರಪ್ಪ ಮೊಯ್ಲಿ ಇಬ್ಬರೂ ಇದರ ರದ್ದತಿಗೆ ಒಲವು ತೋರಿದ್ದಾರೆ. ಆರೋಗ್ಯ ಸಚಿವ ಗುಲಾಂ ನಬಿ ಆಜಾದ್ ಪ್ರತಿಕ್ರಿಯೆಗೆ ಕಾಯಲಾಗುತ್ತಿದೆ.
ಈ ಕುರಿತು ಇರುವ ಭಿನ್ನಾಭಿಪ್ರಾಯ ತೊರೆದು ದೆಹಲಿ ಹೈಕೋರ್ಟ್‌ಗೆ ಸಮಗ್ರ ವರದಿ ಸಲ್ಲಿಸುವಂತೆ ಪ್ರಧಾನಿ ಮನಮೋಹನ್ ಸಿಂಗ್, ಗೃಹ ಹಾಗೂ ಆರೋಗ್ಯ ಸಚಿವಾಲಯಗಳಿಗೆ ಸೂಚಿಸಿದ್ದಾರೆ.
ಸಲಿಂಗ ಕಾಮ ನಿಷೇಧ ಕಾಯ್ದೆಯಡಿ ಜೋಡಿಯೊಂದನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ನಡೆಸುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಗೃಹ ಸಚಿವ ಶಿವರಾಜ್ ಪಾಟೀಲ್ ಹಾಗೂ ಮಾಜಿ ಆರೋಗ್ಯ ಸಚಿವ ಅನ್ಬುಮಣಿ ರಾಮದಾಸ್ ವಿಭಿನ್ನ ಅಭಿಪ್ರಾಯ ತಳೆದಿದ್ದರು. |